Site icon Vistara News

Narendra Modi: ತಮ್ಮದೇ ಪಕ್ಷಕ್ಕೆ ದೇಣಿಗೆ ಕೊಟ್ಟ ಮೋದಿ; ದೇಶಕ್ಕಾಗಿ ಹಣ ಕೊಡಲು ಕರೆ

Narendra Modi

PM Narendra Modi contributes Rs 2,000 to BJP; urges donations for nation-building

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಬಿಜೆಪಿಯು 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ, ಬಿಜೆಪಿಯು ದೇಣಿಗೆ ಸಂಗ್ರಹ ಅಭಿಯಾನ (BJP Donation Drive) ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ತಮ್ಮ ಪಕ್ಷಕ್ಕೆ 2 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಹಾಗೆಯೇ, ದೇಶದ ನಿರ್ಮಾಣಕ್ಕಾಗಿ ಎಲ್ಲರೂ ದೇಣಿಗೆ ನೀಡಿ ಎಂಬುದಾಗಿ ಪ್ರಧಾನಿ ಮನವಿ ಮಾಡಿದ್ದಾರೆ.

“ವಿಕಸಿತ ಭಾರತ ನಿರ್ಮಾಣದ ದಿಸೆಯಲ್ಲಿ ಬಿಜೆಪಿಗೆ ನಾನು ದೇಣಿಗೆ ನೀಡುತ್ತಿರುವುದು ಸಂತಸ ತಂದಿದೆ. ಹಾಗೆಯೇ, ಸದೃಢ ಭಾರತದ ನಿರ್ಮಾಣಕ್ಕಾಗಿ ನಮೋ ಆ್ಯಪ್ ಮೂಲಕ ಪ್ರತಿಯೊಬ್ಬರೂ ದೇಣಿಗೆ ನೀಡಿ ಎಂಬುದಾಗಿ ಮನವಿ ಮಾಡುತ್ತೇನೆ” ಎಂದು ನರೇಂದ್ರ ಮೋದಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಡೊನೇಷನ್‌ ಫಾರ್‌ ನೇಷನ್‌ ಬಿಲ್ಡಿಂಗ್‌ ಎಂಬ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಬಿಜೆಪಿಯ ಹಲವು ನಾಯಕರು ದೇಣಿಗೆ ನೀಡುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ದೇಣಿಗೆ ಅಭಿಯಾನದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೂಡ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಕೂಡ ತಮ್ಮ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ. “ವಿಕಸಿತ ಭಾರತದ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿರುವ ಕನಸು ನನಸಾಗಲಿ ಎಂಬ ದೃಷ್ಟಿಯಿಂದ ನಾನು ವೈಯಕ್ತಿಕವಾಗಿ ಬಿಜೆಪಿಗೆ 1 ಸಾವಿರ ರೂ. ದೇಣಿಗೆ ನೀಡಿದ್ದೇನೆ. ದೇಶದ ನಿರ್ಮಾಣಕ್ಕಾಗಿ ಎಲ್ಲರೂ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಕೊಡುಗೆ ನೀಡೋಣ” ಎಂದು ಜೆ.ಪಿ. ನಡ್ಡಾ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಾಲಕಿ ಬಿಡಿಸಿದ ಪೇಂಟಿಂಗ್‌ ಕೇಳಿ ಪಡೆದ ಮೋದಿ; ನೀವು ಇಷ್ಟವಾಗೋದೇ ಇದಕ್ಕೆ ಎಂದ ಜನ

ಬಿಜೆಪಿಯು 2022-23ನೇ ಹಣಕಾಸು ವರ್ಷದಲ್ಲಿ 719 ಕೋಟಿ ರೂ. ದೇಣಿಗೆ ಸಂಗ್ರಹಿಸಿತ್ತು. ಇದು 2021-22ರ ಸಾಲಿಗಿಂತ ಶೇ.17ರಷ್ಟು ಹೆಚ್ಚಾಗಿತ್ತು. 2021-22ರಲ್ಲಿ ಬಿಜೆಪಿಯು 614 ಕೋಟಿ ರೂ. ದೇಣಿಗೆ ಸಂಗ್ರಹಿಸಿತ್ತು. ಆ ಮೂಲಕ ಎರಡೂ ವರ್ಷ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿದ ಪಕ್ಷ ಎಂಬ ಖ್ಯಾತಿಗೆ ಭಾಜನವಾಗಿತ್ತು. ದೇಣಿಗೆ ಸಂಗ್ರಹದಲ್ಲಿ ನಂತರದ ಸ್ಥಾನ ಕಾಂಗ್ರೆಸ್‌ನದ್ದಾಗಿದೆ. ಬಿಜೆಪಿಗೂ ಮೊದಲೇ ಕಾಂಗ್ರೆಸ್‌ ಕೂಡ ದೇಣಿಗೆ ಅಭಿಯಾನವನ್ನು ಆರಂಭಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version