ಅಹ್ಮದಾಬಾದ್: ಪ್ರಧಾನಮಂತ್ರಿ ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದರೆ ಅವರು ಪ್ರಯಾಣ ಮಾಡುವ ಕಾರಿನ ಮುಂಭಾಗ, ಹಿಂಭಾಗದಲ್ಲೆಲ್ಲ ಬೆಂಗಾವಲು ಪಡೆ ಕಾರುಗಳು ಹೋಗುತ್ತವೆ. ಪ್ರಧಾನಿ ಸಂಚರಿಸುವ ಮಾರ್ಗ ಪೂರ್ವ ನಿರ್ಧರಿತವಾಗುವುದರಿಂದ ಆ ರಸ್ತೆಯಲ್ಲಿ ಇನ್ಯಾವುದೇ ವಾಹನಗಳು ಬಾರದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ. ಇಡೀ ರಸ್ತೆ ತುಂಬ ಪ್ರಧಾನಿ ಕಾರು ಮತ್ತು ಅವರ ಬೆಂಗಾವಲು ವಾಹನಗಳೇ ವೇಗವಾಗಿ ಹೋಗುವುದನ್ನು ನಾವು ನೋಡಿದ್ದೇವೆ.
ಹೀಗಿರುವಾಗ ಇಂದು ಗುಜರಾತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ವಾಹನಗಳು ರಸ್ತೆ ಪಕ್ಕ ನಿಂತು, ಆಂಬ್ಯುಲೆನ್ಸ್ವೊಂದಕ್ಕೆ ದಾರಿ ಬಿಟ್ಟುಕೊಟ್ಟಿವೆ. ಪ್ರಧಾನಿ ಮೋದಿ ನಿನ್ನೆಯಿಂದ ಗುಜರಾತ್ ಪ್ರವಾಸದಲ್ಲಿ ಇದ್ದಾರೆ. ಇಂದು ಪ್ರಧಾನಿ ಮತ್ತು ಇತರ ಅಧಿಕಾರಿಗಳೆಲ್ಲ ಗುಜರಾತ್ನ ಅಹ್ಮದಾಬಾದ್ನಿಂದ ಗಾಂಧಿನಗರಕ್ಕೆ ಹೋಗುತ್ತಿದ್ದರು. ಈ ವೇಳೆ ಆಂಬ್ಯುಲೆನ್ಸ್ ಒಂದು ಸೈರನ್ ಮಾಡುತ್ತ ಬಂದಿದೆ. ಸದ್ದು ಕೇಳುತ್ತಿದ್ದಂತೆ ಪ್ರಧಾನಿ ಮೋದಿ, ಆಂಬ್ಯುಲೆನ್ಸ್ಗೆ ದಾರಿ ಬಿಡುವಂತೆ ತಮ್ಮ ಬೆಂಗಾವಲು ಪಡೆಯ ಸಿಬ್ಬಂದಿಗೆ ಸೂಚಿಸಿದ್ದಾರೆ. ಅದರಂತೆ ಕಪ್ಪು ಕಾರುಗಳು ನಿಧಾನವಾಗಿ ರಸ್ತೆಯ ಎಡಭಾಗಕ್ಕೆ ಸಂಚರಿಸಿ, ನಿಂತಿವೆ. ಹೀಗೆ ಪ್ರಧಾನಿ ಪ್ರಯಾಣ ಮಾಡುತ್ತಿದ್ದ ಕಾರು ಕೂಡ ರಸ್ತೆ ಬದಿಯಲ್ಲಿ ನಿಂತ ಕಾರಣ, ಸುತ್ತಲಿನ ಪ್ರದೇಶಗಳ ಮೇಲೆ ಗಮನ ಇಡಲು ಭದ್ರತಾ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿದಿದ್ದರು ಎಂದು ಗುಜರಾತ್ ಬಿಜೆಪಿ ತಿಳಿಸಿದೆ. ಹಾಗೇ, ವಿಡಿಯೋವನ್ನೂ ಶೇರ್ ಮಾಡಿಕೊಂಡಿದೆ. ‘ಇವರು ನಿಜವಾದ ಜನನಾಯಕ’ ಎಂದು ಕ್ಯಾಪ್ಷನ್ ಬರೆದಿದೆ.
ರೋಗಿಗಳನ್ನು ಹೊತ್ತ ಆಂಬ್ಯುಲೆನ್ಸ್ ಬಂದಾಗ ಅದು ಮುಂದೆ ಸಾಗಲು ಉಳಿದ ವಾಹನಗಳ ಚಾಲಕರು ದಾರಿ ಮಾಡಿಕೊಡಬೇಕು. ಆದರೆ ಎಷ್ಟೋ ಸಲ ಜನಪ್ರತಿನಿಧಿಗಳ ವಾಹನಗಳಿಂದಾಗಿಯೇ ಆಂಬ್ಯುಲೆನ್ಸ್ಗಳು ಮುಂದೆ ಹೋಗಲಾಗದೆ, ಟ್ರಾಫಿಕ್ನಲ್ಲಿ ಸಿಕ್ಕು ಪರದಾಡಿದ ಉದಾಹರಣೆಗಳೂ ಇವೆ. ಹೀಗಿರುವಾಗ ಪ್ರಧಾನಿ ಬೆಂಗಾವಲು ಪಡೆ ವಾಹನಗಳೇ ಆ್ಯಂಬುಲೆನ್ಸ್ಗೆ ದಾರಿ ಬಿಟ್ಟುಕೊಟ್ಟು ಮಾದರಿಯಾಗಿವೆ.
ಇದನ್ನೂ ಓದಿ: Video | ದೇಶದ 3ನೇ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ; ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ