ದಿಸ್ಪುರ: ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ, ಅಸ್ಸಾಂನಲ್ಲಿರುವ ವಿಶ್ವವಿಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತ ಪ್ರದೇಶಕ್ಕೆ (Kaziranga National Park And Tiger Reserve) ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಒಂದು ರಾತ್ರಿ ಅಲ್ಲಿಯೇ ತಂಗಿದ್ದಾರೆ. ಇನ್ನು ಶನಿವಾರ (ಮಾರ್ಚ್ 9) ಬೆಳಗ್ಗೆ ಜೀಪ್ ಹಾಗೂ ಆನೆ ಮೇಲೆ ಸಫಾರಿಯನ್ನೂ (Elephant Safari) ಮೋದಿ ಕೈಗೊಂಡರು. ಅಷ್ಟೇ ಅಲ್ಲ, ಕಾಜಿರಂಗ ಅಭಯಾರಣ್ಯದಲ್ಲಿರುವ ಪ್ರದ್ಯುಮ್ನ, ಲಖಿಮಾಯಿ, ಫೂಲ್‌ಮಾಯಿ ಎಂಬ ಆನೆಗಳಿಗೆ ಮೋದಿ ಕಬ್ಬು ತಿನ್ನಿಸಿದರು.
ಕಬ್ಬು ತಿನಿಸಿರುವ ಕುರಿತು ನರೇಂದ್ರ ಮೋದಿ ಅವರು ಫೋಟೊಗಳ ಸಮೇತ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಲಖಿಮಾಯಿ, ಪ್ರದ್ಯುಮ್ನ ಹಾಗೂ ಫೂಲ್‌ಮಾಯಿಗಳಿಗೆ ಕಬ್ಬು ತಿನ್ನಿಸಿದೆ. ಕಾಜಿರಂಗ ಅಭಯಾರಣ್ಯವು ಘೇಂಡಾಮೃಗಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇಲ್ಲಿ ಹಲವು ತಳಿಗಳ ಅನೇಕ ಆನೆಗಳು ಕೂಡ ಇವೆ” ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
Feeding sugar cane to Lakhimai, Pradyumna and Phoolmai. Kaziranga is known for the rhinos but there are also large number of elephants there, along with several other species. pic.twitter.com/VgY9EWlbCE
— Narendra Modi (@narendramodi) March 9, 2024
ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮಿಹಿಮುಖ್ ಪ್ರದೇಶದಲ್ಲಿ ಮೋದಿ ಅವರು ಸಫಾರಿ ಕೈಗೊಂಡರು. ಇಡೀ ರಾತ್ರಿಯನ್ನು ಪ್ರಧಾನಿಯು ರಾಷ್ಟ್ರೀಯ ಉದ್ಯಾನದಲ್ಲಿಯೇ ಕೈಗೊಳ್ಳುವ ಮೂಲಕ ಕಾಜಿರಂಗ ಅರಣ್ಯದಲ್ಲಿ ಒಂದು ರಾತ್ರಿ ಕಳೆದ ದೇಶದ ಮೊದಲ ಪ್ರಧಾನಿ ಎನಿಸಿದ್ದಾರೆ. ಇದುವರೆಗೆ ದೇಶದ ಯಾವ ಪ್ರಧಾನಿಯೂ ಕಾಜಿರಂಗ ಅರಣ್ಯದಲ್ಲಿ ಒಂದು ರಾತ್ರಿ ಕಳೆದಿರಲಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.
ಕಾಜಿರಂಗ ಸಫಾರಿ ಬಳಿಕ ಮೋದಿ ಅವರು ಜೊರ್ಹಾತ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿಯೇ ಸುಮಾರು 18 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ನಂತರ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Narendra Modi: ಆನೆ ನಡೆದಿದ್ದೇ ದಾರಿ, ಅದರ ಮೇಲೆ ಮೋದಿ ಸಫಾರಿ; ಇಲ್ಲಿವೆ ಫೋಟೊಗಳು
ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಂಟಿ ಕೊಂಬಿನ ಘೇಂಡಾಮೃಗಗಳಿಗೆ ಹೆಸರು ವಾಸಿಯಾಗಿದೆ. 429.69 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ.
#WATCH | Prime Minister Narendra Modi visited Kaziranga National Park in Assam today. He also took an elephant safari here.
— ANI (@ANI) March 9, 2024
The PM also interacted with Van Durga, the team of women forest guards who are at the forefront of conservation efforts. During his visit, he also fed… pic.twitter.com/5sK46yQ6IS
ವಿಶ್ವದಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗಗಳಲ್ಲಿ ಮೂರನೇ ಎರಡು ಭಾಗದಷ್ಟು ಘೇಂಡಾಮೃಗಗಳು ಇದೇ ರಾಷ್ಟ್ರೀಯ ಉದ್ಯಾನದಲ್ಲಿವೆ. ಆನೆ, ಕರಡಿ ಹಾಗೂ ಚಿರತೆಗಳಿಗೂ ಕಾಜಿರಂಗ ಅಭಯಾರಣ್ಯವು ಆಶ್ರಯ ತಾಣವಾಗಿದೆ. ಈ ಉದ್ಯಾನದಲ್ಲಿ ಸಫಾರಿಗೆ ತೆರಳಲು 3,500-4,500 ರೂ. ಪಾವತಿಸಬೇಕಾಗುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ