Site icon Vistara News

ಬಾಲಕಿ ಹಾಡಿಗೆ ತಲೆದೂಗಿದ ಮೋದಿ; ತಮ್ಮ ಶಾಲು ಹೊದಿಸಿ ಸನ್ಮಾನ, ವಿಡಿಯೊ ವೈರಲ್

Narendra Modi

PM Narendra Modi gifts his shawl to young singer after her heartfelt performance

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯಾವುದೇ ಮೂಲೆಗೆ ಹೋದರೂ ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಪುಟ್ಟ ಮಕ್ಕಳ ಜತೆ ಅವರು ಆಟವಾಡುತ್ತಾರೆ. ಮಕ್ಕಳೂ ಅಷ್ಟೇ, ನರೇಂದ್ರ ಮೋದಿ (Narendra Modi) ಅವರ ಚಿತ್ರ ಬಿಡಿಸಿಕೊಂಡು ಉಡುಗೊರೆ ಕೊಡುತ್ತಾರೆ. ಆ ಫೋಟೊಗಳ ಮೇಲೆ ಮೋದಿ ಅವರೂ ಆಟೋಗ್ರಾಫ್‌ ಹಾಕುತ್ತಾರೆ. ಆದರೆ, ಈ ಬಾರಿ ನರೇಂದ್ರ ಮೋದಿ ಅವರೇ ಬಾಲಕಿಯೊಬ್ಬಳಿಗೆ ತಮ್ಮ ಶಾಲನ್ನೇ ಉಡುಗೊರೆ ನೀಡಿದ್ದಾರೆ. ಬಾಲಕಿಯ ಹಾಡು ಮೆಚ್ಚಿದ ಮೋದಿ ಉಡುಗೊರೆ ಕೊಟ್ಟಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ.

ನರೇಂದ್ರ ಮೋದಿ ಅವರು ಪೊಂಗಲ್‌ ಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೇಂದ್ರ ಸಚಿವ ಎಲ್.‌ ಮುರುಗನ್‌ ಅವರ ನಿವಾಸಕ್ಕೆ ತೆರಳಿದ್ದರು. ಅಲ್ಲಿ ಜನರೊಂದಿಗೆ ಮೋದಿ ಪೊಂಗಲ್‌ ಸಂಭ್ರಮದಲ್ಲಿ ಪಾಲ್ಗೊಂಡರು. ಇದೇ ವೇಳೆ, ಬಾಲಕಿಯೊಬ್ಬಳು ಸುಮಧುರವಾಗಿ ಸತ್ಯಂ ಶಿವಂ ಸುಂದರಂ ಹಾಡು ಹಾಡಿದಳು. ಇದರಿಂದ ಸಂತಸಗೊಂಡ ಮೋದಿ ಅವರು ವೇದಿಕೆ ಮೇಲಿನಿಂದ ಬಾಲಕಿಯನ್ನು ಕರೆದು, ತಾವು ಧರಿಸಿದ್ದ ಶಾಲನ್ನು ಬಾಲಕಿಗೆ ಹಾಕಿದರು. ಇದೇ ವೇಳೆ ಬಾಲಕಿಯು ನರೇಂದ್ರ ಮೋದಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಳು.

ಪೊಂಗಲ್‌ ಸಂಭ್ರಮದ ಮಧ್ಯೆಯೇ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, “ದೇಶದಲ್ಲೀಗ ಹಬ್ಬಗಳ ಸಂಭ್ರಮ. ಈಗಾಗಲೇ ದೇಶದ ಜನ ಲೊಹ್ರಿ ಹಬ್ಬವನ್ನು ಆಚರಿಸಿದ್ದಾರೆ. ಇಂದು ಒಂದಷ್ಟು ಜನ ಮಕರ ಸಂಕ್ರಾಂತಿ ಆಚರಿಸಿದರೆ, ನಾಳೆ ಮತ್ತೊಂದಿಷ್ಟು ಜನ ಸಂಕ್ರಾಂತಿಯ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಾರೆ. ಮಾಘ ಬಿಹು ಹಬ್ಬ ಕೂಡ ಸಮೀಪಿಸುತ್ತಿದೆ. ಸಂತಸದಿಂದ ಹಬ್ಬಗಳನ್ನು ಆಚರಿಸುತ್ತಿರುವ ಎಲ್ಲರಿಗೂ ನನ್ನ ಶುಭಾಶಯಗಳು” ಎಂದು ಹೇಳಿದರು.

ಇದನ್ನೂ ಓದಿ: Narendra Modi: ಭರ್ಜರಿ ರೋಡ್‌ ಶೋ, ಪ್ರಾರ್ಥನೆ, ಭಜನೆ; ನಾಶಿಕ್‌ನಲ್ಲಿ ಮೋದಿ ಹವಾ

ಪೊಂಗಲ್‌ ಹಬ್ಬದ ಕುರಿತು ಮಾತನಾಡಿದ ಅವರು, “ಪೊಂಗಲ್‌ ಹಬ್ಬವು ಏಕ ಭಾರತ ಶ್ರೇಷ್ಠ ಭಾರತ ಎಂಬ ಸಂದೇಶವನ್ನು ಸಾರುತ್ತದೆ. ಎಲ್ಲರೂ ಒಂದೇ ಎಂಬ ಒಗ್ಗಟ್ಟಿನ ಭಾವವು 2047ರ ವೇಳೆಗೆ ದೇಶವು ವಿಕಸಿತ ಭಾರತ ಆಗುವಂತೆ ಮಾಡುತ್ತದೆ” ಎಂದು ಹೇಳಿದರು. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು 11 ದಿನಗಳ ವಿಶೇಷ ವ್ರತ ಆಚರಿಸುತ್ತಿದ್ದಾರೆ. ಇದರ ಮಧ್ಯೆಯೇ ಅವರು ಸಾಲು ಸಾಲು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version