ನವದೆಹಲಿ: ದೇಶದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಗಿದೆ. ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ವಂದೇ ಭಾರತ್‌ನಂತಹ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ. ಇದರ ಬೆನ್ನಲ್ಲೇ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಮಹತ್ವದ ಘೋಷಣೆ ಮಾಡಿದ್ದಾರೆ. “ಮುಂದಿನ 5 ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಯಾಣಿಕರಿಗೂ (Railway Ticket) ಕನ್ಫರ್ಮ್ಡ್ ಟಿಕೆಟ್ (Confirmed Tickets) ಸಿಗಲಿವೆ. ಇದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಗ್ಯಾರಂಟಿಯಾಗಿದೆ” ಎಂಬುದಾಗಿ ತಿಳಿಸಿದ್ದಾರೆ.
“ಕಳೆದ 10 ವರ್ಷಗಳಲ್ಲಿ ಭಾರತದ ರೈಲ್ವೆಯನ್ನು ನರೇಂದ್ರ ಮೋದಿ ಅವರು ರೂಪಾಂತರಗೊಳಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ದೇಶದ ರೈಲ್ವೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ನರೇಂದ್ರ ಮೋದಿ ಅವರ ಗ್ಯಾರಂಟಿಯಾಗಿದೆ. ದೇಶಾದ್ಯಂತ ರೈಲುಗಳನ್ನು ಹೆಚ್ಚಿಸಿ, ಪ್ರತಿಯೊಬ್ಬ ಪ್ರಯಾಣಿಕರಿಗೆ ಕನ್ಫರ್ಮ್ಡ್ ಟಿಕೆಟ್ ಸಿಗುವಂತೆ ಮಾಡಲಾಗುತ್ತದೆ. ಇದರಿಂದ ಪ್ರಯಾಣಿಕರು ವೇಟಿಂಗ್ ಲಿಸ್ಟ್ ನೋಡುತ್ತ ಕಾಯುವುದು ತಪ್ಪುತ್ತದೆ. ಎಲ್ಲರಿಗೂ ಸುಲಭವಾಗಿ ರೈಲು ಟಿಕೆಟ್ ಕೊಡುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ” ಎಂದು ಐಎಎನ್‌ಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
IANS Exclusive
— IANS (@ians_india) April 23, 2024
In the next 5 years, it is PM Modi's guarantee that 'all passengers can get a confirmed ticket': Union Minister Ashwini Vaishnaw pic.twitter.com/fv2coqwbof
“ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯು ಮತ್ತಷ್ಟು ಬಲಿಷ್ಠವಾಗಲಿದೆ. ಇದು ದೇಶಾದ್ಯಂತ ರೈಲ್ವೆ ಪ್ರಯಾಣಿಕರಿಗೆ ಹೊಸ ಸೌಲಭ್ಯ, ಮೂಲ ಸೌಕರ್ಯಗಳನ್ನು ಒದಗಿಸಲು ನೆರವಾಗಲಿದೆ. ಅದೇ ರೀತಿ, ಪ್ರಯಾಣಿಕರು ಸುಲಭವಾಗಿ ಹಾಗೂ ಕ್ಷಿಪ್ರವಾಗಿ ರೈಲು ಟಿಕೆಟ್‌ಗಳನ್ನು ಪಡೆಯುವಂತೆ ಮಾಡುವುದು ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ, ಇನ್ನಷ್ಟು ರೈಲುಗಳ ಓಡಾಟ, ದೇಶಾದ್ಯಂತ ರೈಲು ವಿಸ್ತರಣೆ ಮಾಡುವುದು, ರೈಲ್ವೆ ಲೇನ್‌ಗಳನ್ನು ವಿಸ್ತರಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ” ಎಂದು ತಿಳಿಸಿದ್ದಾರೆ.
“2014ರಿಂದ 2024ರ ಅವಧಿಯಲ್ಲಿ ದೇಶಾದ್ಯಂತ 31 ಸಾವಿರ ಹೊಸ ಟ್ರ್ಯಾಕ್‌ಗಳನ್ನು ಅಳವಡಿಸಲಾಗಿದೆ. 2004ರಿಂದ 2014ರ ಅವಧಿಯಲ್ಲಿ 5 ಸಾವಿರ ಕಿಲೋಮೀಟರ್ ರೈಲು ಮಾರ್ಗವು ವಿದ್ಯುದ್ದೀಕರಣವಾಗಿತ್ತು. ಆದರೆ, ಕಳೆದ 10 ವರ್ಷದಲ್ಲಿ ರೈಲ್ವೆ ಮಾರ್ಗದ ವಿದ್ಯುದ್ದೀಕರಣದ ಪ್ರಮಾಣವು 44 ಸಾವಿರ ಕಿಲೋಮೀಟರ್‌ಗೆ ಏರಿಕೆಯಾಗಿದೆ. ಯುಪಿಎ 1 ಹಾಗೂ 2 ಆಡಳಿತದ ಅವಧಿಯಲ್ಲಿ 32 ಸಾವಿರ ಬೋಗಿಗಳನ್ನು ಉತ್ಪಾದಿಸಲಾಗಿತ್ತು. ಆದರೆ, ಕಳೆದ 10 ವರ್ಷದಲ್ಲಿ 54 ಸಾವಿರ ಬೋಗಿಗಳನ್ನು ತಯಾರಿಸಲಾಗಿದೆ” ಎಂದು ವಿವರಿಸಿದರು.