Site icon Vistara News

Narendra Modi: ರಾಹುಲ್‌ ಗಾಂಧಿ ‘ಶಕ್ತಿ’ ಹೇಳಿಕೆಗೆ ಟಕ್ಕರ್;‌ ಸವಾಲು ಸ್ವೀಕಾರ ಎಂದ ಮೋದಿ

Narendra Modi

PM Narendra Modi hits back at Rahul Gandhi over 'Shakti' remark, says 'I accept the challenge'

ಹೈದರಾಬಾದ್:‌ ಲೋಕಸಭೆ ಚುನಾವಣೆ (Lok Sabha Election 2024) ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಎಲ್ಲ ಪಕ್ಷಗಳ ಪ್ರಚಾರ, ಚಟುವಟಿಕೆಗಳು ಜೋರಾಗಿವೆ. ಇದರ ಬೆನ್ನಲ್ಲೇ, ರಾಜಕೀಯ ನಾಯಕರ ನಡುವಿನ ಹೇಳಿಕೆ, ಟೀಕೆ, ವ್ಯಂಗ್ಯ, ಆರೋಪ, ಪ್ರತ್ಯಾರೋಪಗಳೂ ಜಾಸ್ತಿಯಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಪ್ರಯೋಗಿಸಿದ ‘ಶಕ್ತಿ’ (Shakti) ಎಂಬ ಅಸ್ತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ. ಪ್ರತಿಪಕ್ಷಗಳ ಸವಾಲನ್ನು ನಾನು ಸ್ವೀಕರಿಸಿದ್ದೇನೆ ಎಂದು ಮೋದಿ ತಿರುಗೇಟು ನೀಡಿದ್ದಾರೆ.

ತೆಲಂಗಾಣದ ಜಾಗ್ತಿಯಾಲ್‌ನಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಮೋದಿ, ರಾಹುಲ್‌ ಗಾಂಧಿ ಹೆಸರು ಪ್ರಸ್ತಾಪಿಸಿದೆಯೇ ಟಾಂಗ್‌ ನೀಡಿದರು. “ಇಂಡಿಯಾ ಒಕ್ಕೂಟವು ‘ಶಕ್ತಿ’ ವಿರುದ್ಧ ಹೋರಾಟ ನಡೆಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ನನ್ನ ಪ್ರಕಾರ ಎಂದರೆ ಎಲ್ಲ ಮಾತೆಯರು ಕೂಡ ಶಕ್ತಿಯ ಸ್ವರೂಪವೇ ಆಗಿದ್ದಾರೆ. ಆ ಎಲ್ಲ ಮಾತೆಯರನ್ನು ಶಕ್ತಿ ಎಂಬುದಾಗಿಯೇ ಭಾವಿಸಿ ನಾನು ಪ್ರಾರ್ಥಿಸುತ್ತೇನೆ. ನಾನು ಭಾರತಮಾತೆಯನ್ನು ಆರಾಧಿಸುತ್ತೇನೆ. ಆ ಮಾತೆಯೂ ಶಕ್ತಿಯ ರೂಪವೇ ಆಗಿದ್ದಾಳೆ. ಇಂತಹ ಶಕ್ತಿಯನ್ನು ನಿರ್ಮೂಲನೆ ಮಾಡಲು ಹೋರಾಡುತ್ತೇವೆ ಎಂದಿರುವ ಇಂಡಿಯಾ ಒಕ್ಕೂಟದ ಸವಾಲನ್ನು ನಾನು ಸ್ವೀಕರಿಸುತ್ತೇನೆ” ಎಂದು ಮೋದಿ ಹೇಳಿದರು.

“ತೆಲಂಗಾಣದಲ್ಲಿ ಬಿಜೆಪಿ ಅಲೆಯು ದಿನೇದಿನೆ ಹೆಚ್ಚಾಗುತ್ತಿದೆ. ರಾಜ್ಯದ ಜನ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್‌ ಸೇರಿ ಎಲ್ಲ ಪ್ರತಿಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ಜನರನ್ನು ತಲುಪಿವೆ. ಮೇ 13 ಕೂಡ ಸಮೀಪಿಸುತ್ತಿದೆ. ಇಲ್ಲಿನ ಅಲೆಯನ್ನು ನೋಡಿದರೆ, ಬಿಜೆಪಿಯ ರಭಸಕ್ಕೆ ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ ಕೊಚ್ಚಿಹೋಗುತ್ತವೆ” ಎಂದು ಹೇಳಿದರು.

ಇದನ್ನೂ ಓದಿ: Formula 4 Race: ಕಲ್ಲೆಸೆಯುತ್ತಿದ್ದ ಕಾಶ್ಮೀರದಲ್ಲೀಗ ಕಾರ್‌ ರೇಸ್‌; ಮೋದಿ ಮೆಚ್ಚುಗೆ

ರಾಹುಲ್‌ ಗಾಂಧಿ ಹೇಳಿದ್ದೇನು?

ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಶಕ್ತಿ ಎಂಬ ಪದದ ಪ್ರಸ್ತಾಪ ಮಾಡಿದ್ದರು. ಎನ್‌ಡಿಎ ಸರ್ಕಾರವನ್ನು ಶಕ್ತಿಗೆ ಹೋಲಿಸಿದ್ದ ಅವರು, ಆ ಶಕ್ತಿ ವಿರುದ್ಧ ಹೋರಾಡುತ್ತೇವೆ ಎಂದಿದ್ದರು. “ಹಿಂದಿಯಲ್ಲಿ ಶಕ್ತಿ ಎಂಬ ಪದ ಇದೆ. ನಾವು ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ. ಅಷ್ಟಕ್ಕೂ, ಈ ಶಕ್ತಿ ಎಂದರೇನು? ಇದು ನಮಗೆ ಏನು ಮಾಡುತ್ತದೆ? ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version