Site icon Vistara News

PM Narendra Modi: IIIT ಕೋಟಾ ಕ್ಯಾಂಪಸ್, LPG ಪ್ಲಾಂಟ್: ಚುನಾವಣೆಗೆ ಮುನ್ನ ರಾಜಸ್ಥಾನಕ್ಕೆ ಪ್ರಧಾನಿ ಮೋದಿ ಉಡುಗೊರೆ

Narendra Modi

ಹೊಸದಿಲ್ಲಿ: ರಾಜಸ್ಥಾನಕ್ಕೆ ಇಂದು ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕಿದರು. ಕೆಲವನ್ನು ಉದ್ಘಾಟಿಸಿದರು. ಇದರ ನಂತರ ಅವರು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಭೇಟಿ ನೀಡಲಿದ್ದಾರೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Rajasthan assembly election) ಮುಂಚಿತವಾಗಿ ಪ್ರಧಾನಿ ಮೋದಿ ನಾಲ್ಕು ರಾಜ್ಯಗಳಲ್ಲಿ ಪ್ರವಾಸ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆ ಹಮ್ಮಿಕೊಂಡಿದ್ದಾರೆ. ಸೋಮವಾರ ರಾಜಸ್ಥಾನದಲ್ಲಿ ಅವರು ಬಿಜೆಪಿಯ ಚುನಾವಣಾ ತಯಾರಿಗೆ ವೇಗ ನೀಡಿದರು. ರಾಜಸ್ಥಾನದ ಚಿತ್ತೋರ್‌ಗಢಕ್ಕೆ ಭೇಟಿ ನೀಡಿ ಅಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಸುಮಾರು 7,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು ಮತ್ತು ಅಡಿಪಾಯ ಹಾಕಿದರು. ಅನಿಲ ಇಂಧನ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸಲು 4,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೆಹ್ಸಾನಾ-ಬಟಿಂಡಾ-ಗುರುದಾಸ್‌ಪುರ ಗ್ಯಾಸ್ ಪೈಪ್‌ಲೈನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಅಬು ರಸ್ತೆಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಎಚ್‌ಪಿಸಿಎಲ್) ಎಲ್‌ಪಿಜಿ ಘಟಕವನ್ನು ಉದ್ಘಾಟಿಸಿದರು. ಈ ಸ್ಥಾವರ ವಾರ್ಷಿಕವಾಗಿ 86 ಲಕ್ಷ ಸಿಲಿಂಡರ್‌ಗಳನ್ನು ವಿತರಿಸಲಿದೆ. ಇದರ ಪರಿಣಾಮ ಇಂಧನ ಸಾಗಾಟ ಟ್ರಕ್‌ಗಳ ಓಡಾಟದಲ್ಲಿ ವಾರ್ಷಿಕ 7.5 ಲಕ್ಷ ಕಿಲೋಮೀಟರ್‌ ಕಡಿತವಾಗಲಿದೆ.

ಇತರ ಯೋಜನೆಗಳ ಪೈಕಿ, 1,480 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ದಾರಾ-ಜಲಾವರ್-ತೀಂಧರ್ ವಿಭಾಗದ NH-12 (ಹೊಸ NH-52) ನಾಲ್ಕು ಪಥದ ರಸ್ತೆಯನ್ನು ಪ್ರಧಾನಿ ಉದ್ಘಾಟಿಸಿದರು. ಕೋಟಾ ಮತ್ತು ಜಲಾವರ್ ಜಿಲ್ಲೆಗಳಿಂದ ಗಣಿ ಉತ್ಪನ್ನಗಳು ಇದರಲ್ಲಿ ಸಾಗಲಿವೆ. ಸವಾಯಿ ಮಾಧೋಪುರದಲ್ಲಿ ರೈಲ್ವೇ ಮೇಲ್ಸೇತುವೆಯನ್ನು ಎರಡು ಪಥಗಳಿಂದ ನಾಲ್ಕಕ್ಕೆ ಏರಿಸಲು ಶಂಕುಸ್ಥಾಪನೆ ಮಾಡಲಾಯಿತು. ಇದಲ್ಲದೆ ಹಲವಾರು ರೈಲ್ವೆ ಯೋಜನೆಗಳು, ಪ್ರವಾಸೋದ್ಯಮ ಸೌಲಭ್ಯಗಳು ಮತ್ತು ಕೋಟಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಶಾಶ್ವತ ಕ್ಯಾಂಪಸ್ (IIIT Kota Campus) ಅನ್ನು ಉದ್ಘಾಟಿಸಿದರು.

ಚಿತ್ತೋರ್‌ಗಢದಲ್ಲಿ ʻಮೋದಿ ಮೋದಿ’ ಘೋಷಣೆಗಳ ನಡುವೆ ಅವರು ಮೆಗಾ ರೋಡ್ ಶೋ ನಡೆಸಿದರು. ಅವರೊಂದಿಗೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಮತ್ತು ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಕೂಡ ಉಪಸ್ಥಿತರಿದ್ದರು. ಬಳಿಕ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಮೋದಿ ಅವರನ್ನು ಸ್ಮರಿಸಿದರು. “ಬಾಪು ಜನ್ಮದಿನ ನಿಮಿತ್ತ ಇಡೀ ದೇಶವು ಸ್ವಚ್ಛತೆಯ ಬಗ್ಗೆ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿದೆ. ಸ್ವಚ್ಛತಾ ಅಭಿಯಾನವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಿದ್ದಕ್ಕಾಗಿ ನಾನು ಎಲ್ಲಾ ದೇಶವಾಸಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಬಾಪು ಅವರು ಸ್ವಚ್ಛತೆ, ಸ್ವಾವಲಂಬನೆ ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಬಹಳ ಉತ್ಸುಕರಾಗಿದ್ದರು. ಕಳೆದ 9 ವರ್ಷಗಳಲ್ಲಿ, ಬಾಪು ಅವರ ಈ ಮೌಲ್ಯಗಳನ್ನು ದೇಶವು ಬಹಳವಾಗಿ ವಿಸ್ತರಿಸಿದೆʼʼ ಎಂದರು.

ನಂತರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಘಟನೆಗಳಿಗಾಗಿ ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಜನರು ರಾಜಸ್ಥಾನವನ್ನು ಉಳಿಸುತ್ತಾರೆ ಮತ್ತು ಬಿಜೆಪಿ ಸರ್ಕಾರವನ್ನು ತರುತ್ತಾರೆ. 5 ವರ್ಷಗಳಿಂದ ರಾಜಸ್ಥಾನದಲ್ಲಿ ಕಾಂಗ್ರೆಸ್ ಮಾಡಿದ್ದು ಗೂಂಡಾಗಿರಿ. ಕಾಂಗ್ರೆಸ್‌ನ ಪ್ರತಿಯೊಬ್ಬ ಭ್ರಷ್ಟ ವ್ಯಕ್ತಿ, ಗೂಂಡಾ, ಗಲಭೆಕೋರ, ಪ್ರತಿಯೊಬ್ಬ ನಾಯಕನೂ ತನ್ನನ್ನು ತಾನು ಸರ್ಕಾರವೆಂದು ಪರಿಗಣಿಸಿದ್ದಾನೆ. ಇಲ್ಲಿನ ಜನ ಬಿಜೆಪಿ ಬರುತ್ತದೆ ಮತ್ತು ಗೂಂಡಾಗಿರಿ ಹೋಗುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆʼʼ ಎಂದರು.

ಮಧ್ಯಪ್ರದೇಶದಲ್ಲಿ ಸುಮಾರು 19,260 ಕೋಟಿ ರೂಪಾಯಿಗಳ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಮಾಡಲಿದ್ದಾರೆ.

ಇದನ್ನೂ ಓದಿ: PM Narendra Modi: 4 ರಾಜ್ಯ, 6 ದಿನ, 8 ರ‍್ಯಾಲಿ; ಇಂದಿನಿಂದ ಚುನಾವಣಾ ರಾಜ್ಯಗಳಲ್ಲಿ ಪ್ರಧಾನಿ ಮೋದಿ ಸುತ್ತಾಟ!

Exit mobile version