ನವದೆಹಲಿ: ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಕನಸಿನ ಭಾರತ ನಿರ್ಮಾಣ ಮಾಡಲು ನಮ್ಮ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಈ ಎಂಟು ವರ್ಷಗಳಲ್ಲಿ ನಮ್ಮ ಸರ್ಕಾರಕ್ಕೆ ಅನೇಕ ಸವಾಲುಗಳು ಎದುರಾಗಿವೆ. ಆದರೆ ಎಲ್ಲವನ್ನೂ ಸಮರ್ಥವಾಗಿ ಎದುರಿಸಿದ್ದೇವೆ ಮತ್ತು ಸದಾ ಬಡಜನರ ಪರವಾಗಿ ನಿಂತಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಹೇಳಿದರು. ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮಾತುಶ್ರೀ ಕೆಡಿಪಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ ಮಾಡಿದ ಬಳಿಕ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಾರಂಭವಾದಾಗಲೂ ನಮ್ಮ ಸರ್ಕಾರ ಜನಪರ ಯೋಜನೆಗಳ ಅನುಷ್ಠಾನದ ಬಗ್ಗೆ ನಿರ್ಲಕ್ಷ್ಯ ವಹಿಸಲಿಲ್ಲ ಎಂದು ಹೇಳಿದರು.
ದೇಶಕ್ಕೆ ಸೇವೆ ಸಲ್ಲಿಸುವ ವಿಚಾರದಲ್ಲಿ ನಾವೆಂದೂ ರಾಜಿ ಮಾಡಿಕೊಂಡಿಲ್ಲ. ಜಾಗತಿಕವಾಗಿ ಕಾಡಿದ ಕೊವಿಡ್ 19 ಸಾಂಕ್ರಾಮಿಕ, ಯುದ್ಧಗಳ ಸಮಯದಲ್ಲೂ ನಾವು ನಮ್ಮ ದೇಶದ ಬಡಜನರು ಮತ್ತು ಮಧ್ಯಮವರ್ಗದ ಜನರಿಗಾಗಿ ಹಲವು ಅನುಕೂಲಕರ ಯೋಜನೆಗಳನ್ನು ತಂದಿದ್ದೇವೆ. ಕೊರೊನಾ ಸಮಯದಲ್ಲಿ ಬಡವರು ಆಹಾರ ಪದಾರ್ಥಗಳನ್ನು ಪಡೆಯಲು ಕಷ್ಟಪಡುವಂತಾಯ್ತು. ಅದಕ್ಕಾಗಿ ಅವರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಯಿತು. ರೈತರ ಅಕೌಂಟ್‌ಗೆ ನೇರವಾಗಿ ಹಣ ಹಾಕಿ ಅನುಕೂಲ ಮಾಡಿಕೊಡಲಾಯ್ತು. ಜನಧನ ಯೋಜನೆಯ ಪ್ರಯೋಜನವನ್ನು ಇಂದಿಗೂ ಅನೇಕರು ಪಡೆಯುತ್ತಿದ್ದಾರೆ. ಉಚಿತವಾಗಿಯೇ ಲಸಿಕೆಯನ್ನೂ ನೀಡಲಾಯಿತು ಎಂದು ಹೇಳುವ ಮೂಲಕ, ಪ್ರಧಾನಿ ಮೋದಿ ತಮ್ಮ ಸರ್ಕಾರದ ಮಹತ್ವದ ಸಾಧನೆಗಳ ಪಟ್ಟಿ ಮಾಡಿದರು.
ಇದನ್ನೂ ಓದಿ: International Yoga day : ಮೈಸೂರಿಗೆ ಆಗಮಿಸುತ್ತಾರೆ ಪ್ರಧಾನಿ ನರೇಂದ್ರ ಮೋದಿ
ನನ್ನನ್ನು ರೂಪಿಸಿದ್ದೇ ಗುಜರಾತ್ ಮಣ್ಣು. ಸಮಾಜದಲ್ಲಿ ಹೇಗಿರಬೇಕು, ಸಮಾಜಕ್ಕಾಗಿ ಏನು ಮಾಡಬೇಕು ಎಂಬುದನ್ನು ಈ ನೆಲ ನನಗೆ ಕಲಿಸಿದೆ. ಇಲ್ಲಿ ನಾನು ಪಡೆದ ಶಿಕ್ಷಣ-ಸಂಸ್ಕಾರವೇ ಅಂಥದ್ದು. ಅದಕ್ಕೆ ಪ್ರತಿಯಾಗಿ ಗುಜರಾತ್ ಅಭಿವೃದ್ಧಿಗಾಗಿ ಎಲ್ಲವನ್ನೂ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದ ಪ್ರಧಾನಮಂತ್ರಿ, ಗುಜರಾತ್‌ನಲ್ಲಿ ಹಿಂದೆ ಕೇವಲ 9 ವೈದ್ಯಕೀಯ ಕಾಲೇಜುಗಳಿದ್ದವು. 1100 ಸೀಟುಗಳು ಮಾತ್ರ ಲಭ್ಯವಿರುತ್ತಿತ್ತು. ಆದರೆ ಇಂದು ರಾಜ್ಯದಲ್ಲಿ ಖಾಸಗಿ-ಸರ್ಕಾರಿ ಎಲ್ಲ ಸೇರಿ 30 ವೈದ್ಯಕೀಯ ಕಾಲೇಜುಗಳಿವೆ. ಆರ್ಥಿಕವಾಗಿ ಅಷ್ಟೊಂದು ಸಬಲರಲ್ಲದ ಪಾಲಕರೂ ತಮ್ಮ ಮಕ್ಕಳು ವೈದ್ಯರಾಗಲಿ ಎಂದು ಬಯಸುತ್ತಾರೆ. ಅದೆಷ್ಟೋ ಮಂದಿ ಇಂಗ್ಲಿಷ್ ಭಾಷೆ ಸರಿಯಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ವೈದ್ಯರಾಗುವ ಕನಸು ಕೈಬಿಡುತ್ತಾರೆ. ಆದರೆ ನಾವು ಈ ರೂಲ್ಸ್‌ನ್ನು ತೆಗೆದುಹಾಕಿದ್ದೇವೆ. ವಿದ್ಯಾರ್ಥಿಗಳು ತಮಗೆ ಅನುಕೂಲವೆನಿಸುವ ಭಾಷೆಯಲ್ಲೇ ಇಂಜಿನಿಯರಿಂಗ್-ಮೆಡಿಕಲ್ ಶಿಕ್ಷಣ ಪಡೆಯಬಹುದು ಎಂದೂ ಹೇಳಿದರು.
ಈ ಬಾರಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಇದೆ. ಕಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿಯವರು ಆ ರಾಜ್ಯಕ್ಕೆ ಸಾಲುಸಾಲು ಭೇಟಿ ಕೊಟ್ಟು, ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದು ನೆನಪಿರಬಹುದು. ಅದೇ ಮಾದರಿಯನ್ನೂ ಗುಜರಾತ್‌ನಲ್ಲೂ ಅನುಷ್ಠಾನ ತರಲು ಬಿಜೆಪಿ ಮುಂದಾಗಿದೆ. ಗುಜರಾತ್‌ನಲ್ಲಿ ದೊಡ್ಡಮಟ್ಟದಲ್ಲಿರುವ ಪಟೇಲ್ ಸಮುದಾಯವನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಕೆಲವು ಬಾರಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ, ಮುಂದಿನ ಮೂರು ವಾರಗಳಲ್ಲಿ ಮೂರು ಬಾರಿ ಗುಜರಾತ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿ ಇರಲಿದ್ದು, ನಾಳೆ ಗಾಂಧಿನಗರಕ್ಕೆ ಭೇಟಿ ಕೊಡಲಿದ್ದಾರೆ.
ಇದನ್ನೂ ಓದಿ: ಇಂದು ಚೆನ್ನೈಗೆ ಪ್ರಧಾನಿ ಮೋದಿ ಭೇಟಿ; 11 ಮಹತ್ವದ ಯೋಜನೆಗಳಿಗೆ ಶಿಲಾನ್ಯಾಸ