Site icon Vistara News

Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Narendra Modi

No injustice will be tolerated: PM Narendra Modi on NEET UG Paper Leak In Lok Sabha

ನವದೆಹಲಿ: ಲೋಕಸಭೆಯಲ್ಲಿ (Lok Sabha) ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು. ಇದೇ ವೇಳೆ ಅವರು ಕಾಂಗ್ರೆಸ್‌, ರಾಹುಲ್‌ ಗಾಂಧಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲ ಸೈಕಲ್‌ ಕಲಿಯಲು ಹೋದ ಬಾಲಕನು ಬಿದ್ದಾಗ ಆತನಿಗೆ ಬೇರೊಬ್ಬರು ಸಮಾಧಾನ ಮಾಡಿದ ರೀತಿಯನ್ನು ರಾಹುಲ್‌ ಗಾಂಧಿ ಅವರ ಪಕ್ಷದ ಸೋಲಿಗೆ ಹೋಲಿಸಿದರು. ಇನ್ನೂ ಹಲವು ನಿದರ್ಶನಗಳ ಮೂಲಕ ಮೋದಿ ಅವರು ರಾಹುಲ್‌ ಗಾಂಧಿ, ಕಾಂಗ್ರೆಸ್‌ಗೆ ಕುಟುಕಿದರು.

ಸೈಕಲ್‌ ಕಲಿಯುವ ಬಾಲಕನ ಕತೆ ಹೀಗಿದೆ…

“ಬಾಲಕನೊಬ್ಬನು ಸೈಕಲ್‌ ಕಲಿಯಲು ರಸ್ತೆ ಇಳಿಯುತ್ತಾನೆ. ಆತ ಸೈಕಲ್‌ ತುಳಿಯುತ್ತಲೇ ಸ್ವಲ್ಪ ದೂರ ಮುಂದೆ ಹೋಗಿ ಬೀಳುತ್ತಾನೆ. ಸೈಕಲ್‌ನಿಂದ ಬಿದ್ದ ಆತನು ಜೋರಾಗಿ ಅಳಲು ಮುಂದಾಗುತ್ತಾನೆ. ಆಗ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ಬಾಲಕನಿಗೆ ಹಲವು ಸುಳ್ಳುಗಳನ್ನು ಹೇಳುವ ಮೂಲಕ ಆತನನ್ನು ಸಮಾಧಾನಪಡಿಸುತ್ತಾರೆ. ಆಗ ಬಾಲಕನು ಸುಳ್ಳುಗಳನ್ನು ನಂಬಿ ಸುಮ್ಮನಾಗುತ್ತಾನೆ” ಎಂಬುದಾಗಿ ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಛೇಡಿಸಿದರು.

ಮತ್ತೊಬ್ಬ ಬಾಲಕನ 99 ಅಂಕದ ಕತೆ

ಮತ್ತೊಬ್ಬ ಬಾಲಕನ ಕತೆಯ ಮೂಲಕ ರಾಹುಲ್‌ ಗಾಂಧಿ ಅವರಿಗೆ ಮೋದಿ ಕುಟುಕಿದರು. “ಬಾಲಕನೊಬ್ಬ ಪರೀಕ್ಷೆಯಲ್ಲಿ 99 ಅಂಕ ಪಡೆದಿರುತ್ತಾನೆ. ನಾನು 99 ಅಂಕ ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳುತ್ತಾನೆ. ಇದನ್ನು ಕೇಳಿದ ಜನ ಖುಷಿಪಡುತ್ತಾರೆ. ಆದರೆ, ಟೀಚರ್‌ ಬಂದು ನೀನೇಕೆ ಸ್ವೀಟ್‌ ಹಂಚುತ್ತಿದ್ದೀಯಾ? ಎಂದು ಕೇಳುತ್ತಾರೆ. ಏಕೆಂದರೆ, ಆ ಬಾಲಕನು 100ಕ್ಕೆ 99 ಅಂಕ ಪಡೆದಿರುವುದಿಲ್ಲ. ಆತನು 543 ಅಂಕಗಳ ಪೈಕಿ 99 ಅಂಕ ಪಡೆದಿರುತ್ತಾನೆ. ಈಗ ಹೇಳಿ ಯಾರ ವೈಫಲ್ಯವು ಇದಕ್ಕೆ ಮ್ಯಾಚ್‌ ಆಗುತ್ತದೆ” ಎಂದು ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಅವರ ಸ್ಥಿತಿಯನ್ನು ಪರೋಕ್ಷವಾಗಿ ಹೇಳಿದರು.

ಇನ್ನೊಬ್ಬ ಬಾಲಕನಿಗೆ ಹೊಡೆದ ಕತೆ

ಒಬ್ಬ ಬಾಲಕ ಶಾಲೆಯಿಂದ ಮನೆಗೆ ಬಂದು ಜೋರಾಗಿ ಅಳತೊಡಗಿದೆ. ಈತನ ಸ್ಥಿತಿ ನೋಡಿ ಅಮ್ಮನೂ ಹೆದರಿದಳು. ಏಕೆ ಎಂದು ಅಮ್ಮ ಕೇಳಿದಾಗ ಬಾಲಕನು, “ಅಮ್ಮ ನನಗೆ ಶಾಲೆಯಲ್ಲಿ ಹೊಡೆದರು. ನನಗೆ ತುಂಬ ಥಳಿಸಿದರು. ನನಗೆ ಹೊಡೆದರು, ನನಗೆ ಹೊಡೆದರು” ಎಂದು ಇನ್ನಷ್ಟು ಅಳತೊಡಗಿದ. ಆಗ ಅಪ್ಪ, “ಏನಾಯಿತು” ಎಂದು ಕೇಳಿದ. ಬೇರೊಬ್ಬ ಬಾಲಕನ ತಾಯಿಗೆ ಬೈದಿರುವ ಕುರಿತು, ಬೇರೊಬ್ಬ ಬಾಲಕನನ್ನು ಕಳ್ಳ ಎಂದು ಕರೆದಿರುವುದು, ಬೇರೊಬ್ಬನ ಟಿಫಿನ್‌ ಬಾಕ್ಸ್‌ ಕದ್ದು, ಊಟ ಮಾಡಿರುವುದು ಸೇರಿ ಹಲವು ವಿಷಯಗಳನ್ನು ಆ ಬಾಲಕನು ತಂದೆ-ತಾಯಿಗೆ ಹೇಳಲೇ ಇಲ್ಲ ಎಂದು ರಾಹುಲ್‌ ಗಾಂಧಿ ಅವರಿಗೆ ಮೋದಿ ತಿರುಗೇಟು ನೀಡಿದರು.

“ನಿನ್ನೆ ಸಂಸತ್ತಿನಲ್ಲಿ ಒಬ್ಬರು ನನಗೆ ಅವರು ಹೊಡೆದರು, ಇವರು ಹೊಡೆದರು ಎಂಬುದಾಗಿ ಬಾಲಕ ಬುದ್ಧಿಯ ವ್ಯಕ್ತಿಯೊಬ್ಬರು ಕಿರುಚಾಡಿದರು. ಇದು ಜನರ ಸಿಂಪತಿ ಗಳಿಸಲು ಮಾಡಿರುವ ತಂತ್ರವಾಗಿದೆಯೇ ಹೊರತು, ಇದರಲ್ಲಿ ಯಾವುದೇ ಕಾಳಜಿ ಇಲ್ಲ” ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷವು ಈಗ ಬೇರೆ ಪಕ್ಷಗಳ ಬೆಂಬಲದ ಆಧಾರದ ಮೇಲೆ ನಿಂತಿದೆ. ಏಕಾಂಗಿಯಾಗಿ ನಿಂತ ಕಡೆಗಳೆಲ್ಲ ಇವರು ಹೀನಾಯವಾಗಿ ಸೋತಿದ್ದಾರೆ. 13 ರಾಜ್ಯಗಳಲ್ಲಿ ಕಾಂಗ್ರೆಸ್‌ ಜೀರೊ ಆಗಿದೆ. ಆದರೂ ಇವರು ಹೀರೊ ಆಗಿದ್ದಾರೆ. ದೇಶದ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್ ಮೂರನೇ ಬಾರಿ ಹೀನಾಯವಾಗಿ ಸೋತಿದೆ. ಸಹಯೋಗಿ ಪಕ್ಷಗಳ ಹೆಗಲ ಕೂರಿಸಿಕೊಂಡು ಕಾಂಗ್ರೆಸ್ ಮೀಸೆ ತಿರುವುತ್ತಿದೆ. ಬೇರೆ ಪಕ್ಷಗಳ ಚುಂಗು ಹಿಡಿದುಕೊಂಡು ಕಾಂಗ್ರೆಸ್ ಕುಪ್ಪಳಿಸುತ್ತಿದೆ. ಪರಜೀವಿ ಪಕ್ಷವಾಗಿರುವ ಇದು ಈಗ ಅದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನಿಂದ ಸುಳ್ಳುಗಳ ಸರಣಿ…

ಕಾಂಗ್ರೆಸ್‌ ದೇಶದ ಜನರಿಗೆ ಸುಳ್ಳು ಹೇಳುವ ಮೂಲಕ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. “ದೇಶದ ಬಡವರಿಗೆ ಮಾಸಿಕ 8,500 ರೂ. ಜಮೆ ಮಾಡುತ್ತೇವೆ ಎಂದು ಸುಳ್ಳು ಹೇಳಿದರು. ಅಷ್ಟೇ ಅಲ್ಲ, ರಫೇಲ್‌ ಯುದ್ಧವಿಮಾನ, ಎಲ್‌ಐಸಿ, ಎಚ್‌ಎಎಲ್‌, ಚುನಾವಣೆ ಮತಯಂತ್ರ ಸೇರಿ ನೂರಾರು ಸುಳ್ಳುಗಳನ್ನು ಹೇಳಿದರು. ಸುಳ್ಳುಗಳನ್ನು ಹೇಳಿದ್ದಕಕಾಗಿಯೇ ಕಾಂಗ್ರೆಸ್‌ ಪ್ರತಿಪಕ್ಷದಲ್ಲಿ ಕುಳಿತಿದೆ” ಎಂದು ಹೇಳಿದರು.

“ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್‌ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ” ಎಂದು ವಾಗ್ಬಾಣ ಬಿಟ್ಟರು.

ಇದನ್ನೂ ಓದಿ: Narendra Modi: ರಾಹುಲ್‌ ಗಾಂಧಿ ಥರ ಆಡ್ಬೇಡಿ; ಗಂಭೀರವಾಗಿರಿ: ಎನ್‌ಡಿಎ ಸಂಸದರಿಗೆ ಮೋದಿ ಕಿವಿಮಾತು

Exit mobile version