ಲುಂಬಿನಿ (ನೇಪಾಳ): ಬೌದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಗೌತಮ ಬುದ್ಧನ ಜನ್ಮ ಸ್ಥಾನವಾದ ನೇಪಾಳದ ಲುಂಬಿನಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾರತೀಯ ಬೌದ್ಧ ಸಂಸ್ಕೃತಿ, ಪರಂಪರೆ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು. ನೇಪಾಳ ಪ್ರಧಾನಿ ಶೇರ್ ಬಹಾದೂರ್ ದೇವುಬಾ ಅವರು ಕಠ್ಮಂಡುವಿನಿಂದ ಲುಂಬಿನಿಗೆ ಬಂದು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿದೆ.
ನೇಪಾಳದ ಪ್ರಧಾನಿ ಅವರ ಆಹ್ವಾನದ ಮೇರೆಗೆ ಪರ್ವತ ರಾಷ್ಟ್ರಕ್ಕೆ ಭೇಟಿ ನೀಡಿರುವ ಮೋದಿ ಸೋಮವಾರ ಇಡೀ ದಿನ ಲುಂಬಿನಿಯಲ್ಲೇ ಇರಲಿದ್ದಾರೆ. 2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿ ಅವರು ನೇಪಾಳಕ್ಕೆ ಭೇಟಿ ನೀಡುತ್ತಿರುವುದು ಇದು ಐದನೇ ಬಾರಿ. 2019ರಲ್ಲಿ ಮರು ಆಯ್ಕೆ ಆದ ಬಳಿಕ ನಡೆಯುತ್ತಿರುವ ಮೊದಲ ಭೇಟಿ. ಬೆಳಗ್ಗೆ 10.30ರ ಹೊತ್ತಿಗೆ ಲುಂಬಿನಿಯಲ್ಲಿ ಇಳಿಯುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪ್ರಧಾನಿ, “ಬುದ್ಧ ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನೇಪಾಳದ ಜನರ ನಡುವೆ ಬೆರೆಯುವುದಕ್ಕೆ ಖುಷಿಯಾಗುತ್ತಿದೆ” ಎಂದಿದ್ದಾರೆ. ನೇಪಾಳದ ಪ್ರಧಾನಿ ಶೇರ್ ಬಹಾದೂರ್ ದೇವುಬಾ ಅವರೇ ಸ್ವತಃ ಲುಂಬಿನಿಗೆ ಬಂದು ಮೋದಿ ಅವರನ್ನು ಸ್ವಾಗತಿಸಿದರು.
ಮಹಾಮಾಯಾದೇವಿ ದೇವಳಕ್ಕೆ
ಲುಂಬಿನಿ ವಿಮಾನ ನಿಲ್ದಾಣದಿಂದ ಮೊದಲು ಮಹಾ ಮಾಯಾದೇವಿ ದೇವಸ್ಥಾನಕ್ಕೇ ಭೇಟಿ ನೀಡಿದ ಮೋದಿ ಅವರು ಅಲ್ಲಿ ಶೇರ್ ಬಹಾದೂರ್ ದೇವುಬಾ ಜತೆ ಸೇರಿ ಪೂಜೆ ಸಲ್ಲಿಸಿದರು. ದೇವುಬಾ ಅವರ ಪತ್ನಿ ಡಾ. ಆರ್ಜು ರಾಣಾ ದೇವುಬಾ ಕೂಡಾ ಜತೆಗಿದ್ದರು.
ಮಹಾಮಾಯಾದೇವಿ ದೇವಾಲಯದ ಆವರಣದಲ್ಲಿರುವ ಶಿಲೆಗೆ ಅವರು ಗೌರವ ಸಲ್ಲಿಸಿದರು. ಈ ಜಾಗವು ಗೌತಮ ಬುದ್ಧ ಜನಿಸಿದ ಜಾಗವೆಂದು ಹೇಳಲಾಗಿದೆ. ಇಲ್ಲಿ ಬೌದ್ಧ ಸಂಪ್ರದಾಯದಂತೆ ನಡೆದ ಪೂಜೆಯಲ್ಲೂ ಪ್ರಧಾನಿ ಪಾಲ್ಗೊಂಡರು.
ಅಶೋಕ ಸ್ತಂಭಕ್ಕೆ ದೀಪಾರಾಧನೆ
ಇಬ್ಬರೂ ಪ್ರಧಾನಿಗಳು ಸೇರಿ ಮಹಾಮಾಯಾದೇವಿ ದೇವಸ್ಥಾನದ ಪಕ್ಕದಲ್ಲೇ ಇರುವ ಅಶೋಕ ಸ್ತಂಭಕ್ಕೆ ದೀಪಾರಾಧನೆ ನೆರವೇರಿಸಿದರು. ಇದು ಕ್ರಿಸ್ತಪೂರ್ವ 249ರಲ್ಲಿ ಅಶೋಕ ಚಕ್ರವರ್ತಿ ಸ್ಥಾಪಿಸಿದ ಸ್ತಂಭವಾಗಿದೆ. ಗೌತಮ ಬುದ್ಧ ಲುಂಬಿನಿಯಲ್ಲೇ ಜನಿಸಿದ್ದು ಎಂಬುದಕ್ಕೆ ಇರುವ ಮಹತ್ವದ ಶಿಲಾಶಾಸನ ಇಲ್ಲಿದೆ.
ಕಠ್ಮಂಡುವಿಗೆ ಹೋಗುವುದಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಕಾನೂನು ಮಂತ್ರಿ ಕಿರಣ್ ರಿಜಿಜು, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಜಿ.ಕೆ. ರೆಡ್ಡಿ, ಸಂಸ್ಕೃತಿ ಖಾತೆ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿದ್ದಾರೆ. ಇಡೀ ದಿನ ಲುಂಬಿನಿಯಲ್ಲೇ ಉಳಿಯಲಿರುವ ಪ್ರಧಾನಿ ಮೋದಿ ಮತ್ತು ತಂಡ ರಾಜಧಾನಿ ಕಠ್ಮಂಡುವಿಗೆ ಹೋಗದೆ ಎಲ್ಲ ರೀತಿಯ ಮಾತುಕತೆಗಳನ್ನು ಲುಂಬಿನಿಯಲ್ಲೇ ಮುಗಿಸಲಿದೆ. ಇದಕ್ಕೆ ಪೂರಕವಾಗಿ ನೇಪಾಳ ಪ್ರಧಾನಿ ದೇವುಬಾ ಅವರೂ ತಮ್ಮ ಸಂಪುಟದ ಪ್ರಮುಖ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಭಾನುವಾರ ಸಂಜೆಯೇ ಲುಂಬಿನಿಗೆ ಆಗಮಿಸಿದ್ದಾರೆ.
ಭೇಟಿ ಯಾಕೆ ಮಹತ್ವ?
ನೇಪಾಳ ಹಲವಾರು ರೀತಿಯಲ್ಲಿ ಆಯಕಟ್ಟಿನ ಪ್ರದೇಶವಾಗಿದೆ. ಅದರ ಮೇಲೆ ಪ್ರಭಾವ ಬೀರಲು ಹಲವು ರಾಷ್ಟ್ರಗಳು ಪ್ರಯತ್ನ ನಡೆಸುತ್ತಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಮೆರಿಕ, ಇಂಗ್ಲಂಡ್ ಮತ್ತು ಚೀನಾಗಳ ಹಲವು ಪ್ರಮುಖ ನಾಯಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ನೇಪಾಳದ ಒಲವನ್ನು ಉಳಿಸಿಕೊಳ್ಳುವುದು ಭಾರತಕ್ಕೆ ತುಂಬ ಮುಖ್ಯ. ಆದರೆ ಈ ಬಾರಿಯದು ಒಂದು ಕೇವಲ ಧಾರ್ಮಿಕ ಭೇಟಿ, ಯಾವುದೇ ಕಾರ್ಯತಾಂತ್ರಿಕ, ರಾಜತಾಂತ್ರಿಕ ಮಹತ್ವ ಇಲ್ಲ ಎಂದು ಅಧಿಕೃತವಾಗಿ ಹೇಳಲಾಗಿದೆ.
ಭಾರತದ ಮಾಜಿ ವಿದೇಶಾಂಗ ಸಚಿವ ಕಮಲ್ ಥಾಪಾ ಅವರ ಪ್ರಕಾರ, ನೇಪಾಳದಲ್ಲಿ ನಡೆಯುತ್ತಿರುವ ಭೌಗೋಳಿಕ ಮತ್ತು ರಾಜಕೀಯ ಚಟುವಟಿಕೆ ಮತ್ತು ನೇಪಾಳದ ಕೆಲವೊಂದು ನಿಲುವುಗಳ ಬದಲಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.