Site icon Vistara News

Atal Setu: ಅಟಲ್ ಸೇತು ಲೋಕಾರ್ಪಣೆ; ಇದು ದೇಶದ ಅತಿ ಉದ್ದದ ಸಮುದ್ರ ಸೇತುವೆ

PM Narendra Modi inaugurated Atal Setu in mumbai

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ದೇಶದ ಅತಿ ಉದ್ದದ ಸಮುದ್ರ ಸೇತುವೆ ಅಟಲ್‌ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ (Mumbai Trans Harbour Link-MTHL) ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಮಧ್ಯಾಹ್ನ ಲೋಕಾರ್ಪಣೆ ಮಾಡಿದರು. 21.8 ಕಿ.ಮೀ ಉದ್ದದ ಈ ಅಟಲ್ ಸೇತು ದಕ್ಷಿಣ ಮುಂಬೈಯಿಂದ (South Mumbai) ನವೀ ಮುಂಬೈ (Navi Mumbai) ಅನ್ನು ಸಂಪರ್ಕಿಸುತ್ತದೆ ಮತ್ತು ಪ್ರತಿದಿನ ಸುಮಾರು 70,000 ವಾಹನಗಳು ಈ ಮಾರ್ಗದಲ್ಲಿ ಓಡಾಡಲಿವೆ. ಈ ಸೇತುವೆ ಸಂಪರ್ಕ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಗುಲಿದ ವೆಚ್ಚ ಎಷ್ಟು?

ಈ ಸೇತುವೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಬರೋಬ್ಬರಿ 21,200 ಕೋಟಿ ರೂಪಾಯಿ. ಈ ಪೈಕಿ 15,000 ಕೋಟಿ ರೂ. ಸಾಲ ಪಡೆದುಕೊಳ್ಳಲಾಗಿದೆ. ಇದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಇರುವ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಸೇತುವೆಯ ವೈಶಿಷ್ಟ್ಯ ಏನು?

ಈ ಅಟಲ್‌ ಸೇತು ದೇಶದ ಅತೀ ದೊಡ್ಡ ಮತ್ತು ಜಗತ್ತಿನ 12ನೇ ಅತೀ ದೊಡ್ಡ ಸಮುದ್ರ ಸೇತುವೆ ಎನಿಸಿಕೊಂಡಿದೆ. 21.8 ಕಿ.ಮೀ ಉದ್ದದ ಈ ಸೇತುವೆಯು 16.5 ಕಿ.ಮೀ ಸಮುದ್ರದಲ್ಲಿ ಮತ್ತು 5.5 ಕಿ.ಮೀ ಭೂ ಪ್ರದೇಶದಲ್ಲಿ ಚಾಚಿಕೊಂಡಿದೆ. ಸಮುದ್ರ ಮಾರ್ಗವು ಎರಡೂ ಬದಿಗಳಲ್ಲಿ ಮೂರು ಮತ್ತು 2 ತುರ್ತು ಪಥಗಳನ್ನು ಒಳಗೊಂಡಿದೆ. ಈ ಸೇತುವೆಯು ನವೀ ಮುಂಬೈಯ ಉಲ್ವೆ ಮತ್ತು ದಕ್ಷಿಣ ಮುಂಬೈ ನಡುವಿನ ಎರಡು ಗಂಟೆಗಳ ಪ್ರಯಾಣದ ಸಮಯವನ್ನು ಕೇವಲ 15-20 ನಿಮಿಷಗಳಿಗೆ ಇಳಿಸಲಿದೆ. ಮೊದಲ ವರ್ಷ ಏಕಮುಖ ಟೋಲ್ ದರ 250 ರೂ. ಮತ್ತು ರೌಂಡ್-ಟ್ರಿಪ್ ಟೋಲ್ ದರ 375 ರೂ. ನಿಗದಿಪಡಿಸಲಾಗಿದೆ. ಕಾರ್ಯಾಚರಣೆ ಪ್ರಾರಂಭವಾದ ಒಂದು ವರ್ಷದ ನಂತರ ದರಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ.

ದ್ವಿಚಕ್ರ ವಾಹನಗಳಿಗೆ ಪ್ರವೇಶವಿಲ್ಲ

ಎಂಟಿಎಚ್ಎಲ್‌ನಲ್ಲಿ ಕಾರು, ಲಘು ವಾಹನಗಳು, ಮಿನಿ ಬಸ್‌ಗಳು ಮತ್ತು ಬಸ್‌ಗಳ ಗರಿಷ್ಠ ವೇಗದ ಮಿತಿ ಗಂಟೆಗೆ 100 ಕಿ.ಮೀ. ಬೈಕ್‌ಗಳು ಸೇರಿದಂತೆ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು ಮತ್ತು ಟ್ರ್ಯಾಕ್ಟರ್‌ಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮೂರನೇ ಮುಂಬೈ

ಸಮುದ್ರ ಸೇತುವೆಯ ತುದಿಯಲ್ಲಿರುವ ಉಲ್ವೆಯನ್ನು ‘ಮೂರನೇ ಮುಂಬೈ’ ಆಗಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತನೆ ನಡೆಸಿದೆ. “ನಾವು ಇದನ್ನು ಮೂರನೇ ಮುಂಬೈ ಎಂದು ಕರೆಯುತ್ತಿದ್ದೇವೆ. ಇದು ಉತ್ತಮವಾಗಿ ಅಭಿವೃದ್ಧಿ ಹೊಂದಿದ ನಗರವು ಹೊಂದಿರಬೇಕಾದ ಎಲ್ಲ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರಲಿದೆ. ವಸತಿ – ಐಷಾರಾಮಿ ವಾಣಿಜ್ಯ ಸಂಕೀರ್ಣಗಳು, ಡೇಟಾ ಕೇಂದ್ರಗಳಿಂದ ಹಿಡಿದು ಎಲ್ಲ ಎಲ್ಲ ರೀತಿಯ ಸೌಲಭ್ಯ ಇಲ್ಲಿ ಇರಲಿದೆ. ಜತೆಗೆ ದೃಢವಾದ ಸಾರ್ವಜನಿಕ ಸಾರಿಗೆಯನ್ನು ಸಹ ಅಭಿವೃದ್ಧಿಪಡಿಸಲಾಗುವುದು” ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನು ಮುಂಬೈ ಮೆಟ್ರೋಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (Mumbai Metropolitan Regional Development Authority-MMRDA)) ಅಭಿವೃದ್ಧಿ ಪಡಿಸಲಿದೆ. ರಾಯಗಢ್‌ ಜಿಲ್ಲೆಯ ಪಟ್ಟಣಗಳಾದ ಉಲ್ವೆ, ಪೆನ್, ಪನ್ವೇಲ್, ಉರಾನ್, ಕರ್ಜತ್ ಮತ್ತು ಅಲಿಬಾಗ್ ಕೂಡ ಉದ್ದೇಶಿತ ಮೂರನೇ ಮುಂಬೈನ ಭಾಗವಾಗಲಿದೆ.

ಈ ಸುದ್ದಿಯನ್ನೂ ಓದಿ: Sethusamudram Project | ಸೇತುಸಮುದ್ರಂ ಪ್ರಾಜೆಕ್ಟ್‌ಗೆ ತಮಿಳುನಾಡು ವಿಧಾನಸಭೆ ನಿರ್ಣಯ, ಬಿಜೆಪಿಯಿಂದಲೂ ಬೆಂಬಲ!

Exit mobile version