ನವದೆಹಲಿ: ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಉದ್ಯಮದ (Online Gaming Industry) ಏಳಿಗೆ ಹೊಂದಬೇಕು, ಆನ್‌ಲೈನ್ ಗೇಮ್‌ಗಳು ಕೂಡ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು, ಯುವಕ-ಯುವತಿಯರು ಆನ್‌ಲೈನ್ ಗೇಮಿಂಗ್ ಉದ್ಯಮದ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕಿ ಬಾತ್ (Mann Ki Baat) ಸೇರಿ ಹಲವು ಕಾರ್ಯಕ್ರಮಗಳಲ್ಲಿ ಹೇಳುತ್ತಲೇ ಇರುತ್ತಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ದೇಶದ ಟಾಪ್ ಗೇಮರ್‌ಗಳ (Top Gamers) ಜತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಅವರು ಕೆಲ ವಿಡಿಯೊಗೇಮ್‌ಗಳನ್ನೂ ಆಡಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್ ಆಗಿದೆ.
ಹೌದು, ನರೇಂದ್ರ ಮೋದಿ ಅವರು ದೇಶದ ಟಾಪ್ ಗೇಮರ್‌ಗಳಾದ ಅನಿಮೇಶ್ ಅಗರ್ವಾಲ್, ನಮನ್ ಮಾಥುರ್, ಮಿಥಿಲೇಶ್ ಪಟಾಂಕರ್, ಪಾಯಲ್ ಧಾರೆ, ತೀರ್ಥ್ ಮೆಹ್ತಾ, ಗಣೇಶ್ ಗಂಗಾಧರ್ ಹಾಗೂ ಅಂಶು ಬಿಷ್ಟ್ ಅವರ ಜತೆ ಮೋದಿ ಕೆಲ ಸಮಯ ಕಳೆದಿದ್ದಾರೆ. ಆನ್‌ಲೈನ್ ಗೇಮಿಂಗ್ ಉದ್ಯಮ, ಇದರಲ್ಲಿರುವ ಉದ್ಯೋಗ ಅವಕಾಶಗಳು, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ಗೇಮ್‌ಗಳ ಪಾತ್ರ, ಕೌಶಲ ಅಭಿವೃದ್ಧಿ, ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ವಿಷಯಗಳ ಬಗ್ಗೆ ಮೋದಿ ಅವರು ಯುವ ಗೇಮರ್‌ಗಳ ಜತೆ ಚರ್ಚಿಸಿದ್ದಾರೆ.
Prime Minister Narendra Modi interacts with top Indian Gamers
— ANI (@ANI) April 11, 2024
PM Modi also tried his hand at a few games. pic.twitter.com/QT11YwOZfp
“ದೇಶದ ಗೇಮಿಂಗ್ ಇಂಡಸ್ಟ್ರಿಯನ್ನು ಇನ್ನಷ್ಟು ಮುನ್ನೆಲೆಗೆ ತರುವುದು ಹೇಗೆ” ಎಂಬುದರ ಕುರಿತು ಕೂಡ ಮೋದಿ ಚರ್ಚಿಸಿದ್ದಾರೆ. ಇದೇ ವೇಳೆ ಗೇಮರ್ ಒಬ್ಬರು, “ಭಾರತದ ಪುರಾಣಶಾಸ್ತ್ರದ ಅನ್ವಯವೂ ಗೇಮಿಂಗ್‌ಅನ್ನು ಅಭಿವೃದ್ಧಿಪಡಿಸಬಹುದು” ಎಂಬುದಾಗಿ ಹೇಳಿದ್ದಾರೆ. “ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದೇ ನಮ್ಮ ಭಾಗ್ಯ. ಅವರು ಬಂದಾಗ ನನ್ನ ಹೃದಯ ಬಡಿತ ನಿಂತಿತ್ತು” ಎಂದು ಮತ್ತೊಬ್ಬರು ಹೇಳಿದ್ದಾರೆ. “ಗೇಮಿಂಗ್‌ನಲ್ಲಿ ಪ್ರಧಾನಿ ಅವರು ನಮೋ ಒಪಿ (NaMo OP) (OP-Over Powered) ಇದ್ದಹಾಗೆ” ಎಂದು ಇನ್ನೊಬ್ಬರು ಬಣ್ಣಿಸಿದ್ದಾರೆ.
ಅಷ್ಟೇ ಅಲ್ಲ, ಗೇಮಿಂಗ್‌ಅನ್ನು ಗ್ಯಾಂಬ್ಲಿಂಗ್ ಜತೆ ಹೋಲಿಸಲಾಗುತ್ತಿದೆ. ಹಣ ಹೂಡಿಕೆ ಮಾಡಿ, ಗೇಮ್ ಆಡುವುದಕ್ಕೂ, ಕೌಶಲ ಅಭಿವೃದ್ಧಿಗಾಗಿ ವಿಡಿಯೊ ಗೇಮ್ ಆಡುವುದಕ್ಕೂ ವ್ಯತ್ಯಾಸವಿದೆ. ಇದು ವ್ಯಸನ ಆಗದೆ, ಹವ್ಯಾಸ ಆಗಬೇಕು ಎಂಬುದು ಸೇರಿ ಹಲವು ವಿಷಯಗಳು ಚರ್ಚೆಗೆ ಬಂದವು. ಮಾತುಕತೆ ಬಳಿಕ ಮೋದಿ ಅವರು ಕೂಡ ಕೆಲ ಗೇಮ್‌ಗಳನ್ನು ಆಡಿದರು. ಯುವ ಗೇಮರ್‌ಗಳ ಅಭಿಪ್ರಾಯವನ್ನು ಮೋದಿ ಕೇಳಿದರು.
“ಮೋದಿ ಅವರು ತುಂಬ ಕ್ಷಿಪ್ರವಾಗಿ ವಿಡಿಯೊ ಗೇಮ್ ಆಡುವುದನ್ನು ಕಲಿತರು. ಅವರ ಚಿಂತನಾ ವೇಗ ಅದ್ಭುತ” ಎಂದು ಗೇಮರ್ ಒಬ್ಬರು ಹೇಳಿದ್ದಾರೆ. ಮೋದಿ ಅವರ ಮಾತುಕತೆ ಕುರಿತ ಕೆಲವೇ ನಿಮಿಷಗಳ ವಿಡಿಯೊ ಈಗ ಲಭ್ಯವಾಗಿದ್ದು, ಶೀಘ್ರದಲ್ಲೇ ಪೂರ್ತಿ ವಿಡಿಯೊ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಮೋದಿ ಅವರು ವರ್ಚ್ಯುವಲ್ ರಿಯಾಲಿಟಿ (VR Based) ಆಧಾರಿತ, ಮೊಬೈಲ್ ಗೇಮ್ ಸೇರಿ ಹಲವು ಗೇಮ್‌ಗಳನ್ನು ಆಡಿದರು.
ಇದನ್ನೂ ಓದಿ: Narendra Modi: ಭಾರತ-ಚೀನಾ ಗಡಿ ಬಿಕ್ಕಟ್ಟು ಶೀಘ್ರ ಬಗೆಹರಿಯಲಿ; ಪ್ರಧಾನಿ ಮೋದಿ ಮನದಾಳ