ನವದೆಹಲಿ: 2024ರ ಭಾರತದ ಗಣರಾಜ್ಯೋತ್ಸವಕ್ಕೆ (Republic Day 2024) ಮುಖ್ಯ ಅತಿಥಿಯಾಗಿ (Chief Guest) ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಹ್ವಾನ ನೀಡಿದ್ದಾರೆ. ಸೆಪ್ಟೆಂಬರ್ 9 ಮತ್ತು 10ರಂದು ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಈ ಆಹ್ವಾನ ನೀಡಿದ್ದಾರೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬುಧವಾರ ಹೇಳಿದ್ದಾರೆ(US Ambassador to India Eric Garcetti).
ಗಣರಾಜ್ಯೋತ್ಸವದ ಸಂದರ್ಭದಲ್ಲೇ ಭಾರತದಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸಲಾಗಿದೆಯೇ ಎಂಬ ಪ್ರಶ್ನೆಗೆ ಎರಿಕ್ ಗಾರ್ಸೆಟ್ಟಿ ಅವರು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು. ಕ್ವಾಟ್, ಭಾರತ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡ ಕೂಟವಾಗಿದೆ. ಮುಂದಿನ ಕ್ವಾಡ್ ಸಭೆಯನ್ನು ಆಯೋಜಿಸುವುದು ಭಾರತದ ಸರದಿಯಾಗಿದೆ. ಗಣರಾಜ್ಯೋತ್ಸವಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಈ ಮಾಹಿತಿಯನ್ನು ನೀಡಿದರು.
2023ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಪಾಲ್ಗೊಂಡಿದ್ದರು. ಪ್ರತಿ ವರ್ಷವೂ ಭಾರತವು ಗಣರಾಜ್ಯೋತ್ಸವದ ವೇಳೆ ವಿಶ್ವ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ. ಆದರೆ, ಕೋವಿಡ್ ಕಾರಣಕ್ಕಾಗಿ 2021 ಮತ್ತು 2022ರ ಗಣರಾಜ್ಯೋತ್ಸವದ ವೇಳೆ ಯಾವುದೇ ನಾಯಕರಿಗೆ ಆಹ್ವಾನ ನೀಡಿರಲಿಲ್ಲ.
ಈ ಸುದ್ದಿಯನ್ನೂ ಓದಿ: G20 Summit 2023: ನರೇಂದ್ರ ಮೋದಿಯನ್ನು ಶ್ಲಾಘಿಸಿದ ಅಮೆರಿಕ ಅಧ್ಯಕ್ಷ ಬೈಡೆನ್
2020ರಲ್ಲಿ ಅಂದಿನ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಮುಖ್ಯ ಅತಿಥಿಯಾಗಿದ್ದರು. 2019ರಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಆಗಮಿಸಿದ್ದರೆ, 2018ರಲ್ಲಿ ಆಸಿಯಾನ್‌ನ ಎಲ್ಲ 10 ರಾಷ್ಟ್ರಗಳು ಗಣರಾಜ್ಯೋತ್ಸವದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
2017ರಲ್ಲಿ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಖ್ಯ ಅತಿಥಿಯಾಗಿದ್ದರೆ, 2016ರಲ್ಲಿ ಆಗಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಆಗಮಿಸಿದ್ದರು. ಇನ್ನು 2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು.