ನವದೆಹಲಿ: ಭಾರತೀಯ ಜನತಾ ಪಾರ್ಟಿ(BJP) ಮೊದಲಿನಿಂದಲೂ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ(uniform civil code – UCC) ಜಾರಿಗೆ ಆಗ್ರಹಿಸುತ್ತಲೇ ಬಂದಿದೆ. ಹಾಗೆಯೇ, ಈ ವಿಷಯವನ್ನು ಪ್ರತಿ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸುತ್ತದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈಗ ಏಕರೂಪ ನಾಗರಿಕ ಸಂಹಿತೆ ಜಾರಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಆದರೆ, ಈ ವಿಷಯದಲ್ಲಿ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವರು ಈಗ ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟಲಾಗುತ್ತಿದೆ. ಸಂವಿಧಾನ ಕೂಡ ಸಮಾನ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಪ್ರತಿಪಕ್ಷಗಳು ಮಾತ್ರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಹೇಳಿದರು.
ಬಿಜೆಪಿಯು ಎಂದಿಗೂ ತುಷ್ಟಿಕರಣದ ರಾಜಕಾರಣವನ್ನು ಮಾಡುವುದಿಲ್ಲ ಎಂದು ನಿರ್ಧರಿಸಿದೆ. ಯಾರು ತ್ರಿವಳಿ ತಲಾಖ್‌ಗೆ ಬೆಂಬಲ ನೀಡುತ್ತಿದ್ದಾರೋ ಅವರು ನಮ್ಮ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ಘೋರ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಯಾರು ಮತಗಳನ್ನು ಕೇಳುತ್ತಿದ್ದಾರೋ ಅವರೇ ಬಡವರಿಗೆ ಗರಿಷ್ಠ ಪ್ರಮಾಣದಲ್ಲಿ ಅನ್ಯಾಯವನ್ನು ಮಾಡಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ದೂರಿದರು.
ಈ ಸುದ್ದಿಯನ್ನೂ ಓದಿ: PM Modi US Visit: ನರೇಂದ್ರ ಮೋದಿಗೆ ಜೋ ಬೈಡೆನ್ ಟಿ-ಶರ್ಟ್ ಗಿಫ್ಟ್; ಅದರಲ್ಲಿ ಬರೆದಿದ್ದೇನು?
ಈಜಿಪ್ಟ್‌ನಲ್ಲಿ 80, 90 ವರ್ಷಗಳ ಹಿಂದೆಯೇ ತ್ರಿವಳಿ ತಲಾಖ್‌ವನ್ನು ರದ್ದು ಮಾಡಲಾಗಿದೆ. ಒಂದು ವೇಳೆ ತ್ರಿವಳಿ ತಲಾಖ್ ಬೇಕೇ ಬೇಕು ಎಂದಾದರೆ, ಪಾಕಿಸ್ತಾನದಲ್ಲಿ ಏಕೆ ನಿಷೇಧ ಮಾಡಲಾಗಿದೆ, ಕತಾರ್ ಮತ್ತು ಇತರ ಮುಸ್ಲಿಮ್ ಬಾಹುಳ್ಯದ ರಾಷ್ಟ್ರಗಳಲ್ಲಿ ಏಕೆ ಈ ತ್ರಿವಳಿ ತಲಾಕ್ ನಿಷೇಧ ಮಾಡಿದ್ದಾರೆಂದು ಪ್ರಶ್ನಿಸಿದರು.
ನಮ್ಮ ಮುಸ್ಲಿಮ್ ಹೆಣ್ಣು ಮಕ್ಕಳಿಗೆ ತ್ರಿವಳಿ ತಲಾಕ್ ಯಾವುದೇ ನ್ಯಾಯವನ್ನು ಕೊಡಿಸುವುದಿಲ್ಲ. ಇಡೀ ಕುಟುಂಬವೇ ಇದರಿಂದ ಹಾಳಾಗುತ್ತದೆ. ಒಂದು ತ್ರಿವಳಿ ತಲಾಖ್ ಇಸ್ಲಾಮ್‌ನ ಅಗತ್ಯ ಭಾಗವಾಗಿದ್ದರೆ ಕತಾರ್, ಜೋರ್ಡಾನ್, ಇಂಡೋನೇಷ್ಯಾದಂಥ ಮುಸ್ಲಿಮ್ ರಾಷ್ಟ್ರಗಳಲ್ಲಿ ಏಕೆ ನಿಷೇಧಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.