ನವದೆಹಲಿ: ಸುಮಾರು 45 ಸಾವಿರ ಜನರ ಸಾವಿಗೆ ಕಾರಣವಾದ ಟರ್ಕಿ ಮತ್ತು ಸಿರಿಯಾ ಭೂಕಂಪಪೀಡಿತ ಪ್ರದೇಶದಲ್ಲಿ ಭಾರತದ ಎನ್‌ಡಿಆರ್‌ಎಫ್ (NDRF) ತಂಡವು ಆಪರೇಷನ್ ದೋಸ್ತ್ (Operation Dost) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಸೈ ಎನಿಸಿಕೊಂಡಿದೆ. ಈ ತಂಡವು ಭಾರತಕ್ಕೆ ಮರಳಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಆಪರೇಷನ್ ದೋಸ್ತ್ ತಂಡದೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲದೇ, ನೀವೆಲ್ಲರೂ ಭಾರತವು ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟರ್ಕಿ ಮತ್ತು ಸಿರಿಯಾದಲ್ಲಿರುವ ಭಾರತೀಯ ತಂಡವು ಇಡೀ ವಿಶ್ವವು ಭಾರತಕ್ಕೆ ಒಂದೇ ಕುಟುಂಬ ಎಂಬ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ. . “ಆಪರೇಷನ್ ದೋಸ್ತ್” ಅಡಿಯಲ್ಲಿ ಭೂಕಂಪಪೀಡಿತ ಟರ್ಕಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಪ್ರಧಾನಿ ಮೋದಿ ನಿರ್ದೇಶನ ನೀಡಿದ್ದರು. ಬಳಿಕ ಫೆಬ್ರವರಿ 7 ರಂದು ಭೂಕಂಪ ಪೀಡಿತ ಪ್ರದೇಶಕ್ಕೆ ಸಹಾಯ ಮಾಡಲು ಎನ್‌ಡಿಆರ್‌ಎಫ್‌ನ ಮೂರು ತಂಡಗಳನ್ನು ಕಳುಹಿಸಲಾಗಿತ್ತು.
ಆಪರೇಷನ್ ದೋಸ್ತ್ ಸದಸ್ಯರಿಗೆ ಸೆಲ್ಯೂಟ್
ಭಾರತೀಯ ತಂಡದ ಸದಸ್ಯರಿಗೆ ಅವರ ಶ್ರಮಕ್ಕೆ ಆಶೀರ್ವಾದ ಮಾಡಿದ ಟರ್ಕಿಯ ತಾಯಿಯ ಚಿತ್ರಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ಸಂತ್ರಸ್ತ ಪ್ರದೇಶಗಳಲ್ಲಿ ನಡೆಸಲಾದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳ ಪ್ರತಿ ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಟ್ಟಿದ್ದಾರೆ ಎಂದು ತಿಳಿಸಿದರು.
ಇಂಥ ಪರಿಸ್ಥಿತಿಗಳಲ್ಲಿನ ನನ್ನ ಅನುಭವದ ಪ್ರಕಾರ ಹೇಳುವುದಾದರೆ, ನಿಮ್ಮ ಕಠಿಣ ಪರಿಶ್ರಮ, ಸ್ಫೂರ್ಥಿ ಮತ್ತು ಎಮೋಷನ್‌ಗಳಿಗೆ ನಿಮಗೆಲ್ಲರಿಗೂ ನಾನು ಸೆಲ್ಯೂಟ್ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ದೋಸ್ತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತಂಡದ ಸದಸ್ಯರಿಗೆ ತಿಳಿಸಿದರು.
ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಮತ್ತೆ ಭೂಕಂಪ, 6.3 ತೀವ್ರತೆ ದಾಖಲು, ಧರೆಗುರುಳಿದ ಕಟ್ಟಡಗಳು
ಸ್ವಾವಲಂಬಿಗಳು ಮತ್ತು ನಿಸ್ವಾರ್ಥಿಗಳು
ಯಾರು ತಮ್ಮಷ್ಟಕ್ಕೆ ತಾವೇ ಸಹಾಯ ಮಾಡಿಕೊಳ್ಳಲು ಸಮರ್ಥರಾಗಿರುತ್ತಾರೋ ಅವರನ್ನು ಸ್ವಾಲಂಬಿಗಳು ಎನ್ನಬಹುದು. ಆದರೆ, ಬೇರೆಯವರಿಗೆ ಅಗತ್ಯವಿದ್ದಾಗ ಅವರಿಗೂ ಸಹಾಯ ಮಾಡಲು ಸಮರ್ಥರು ಇರುತ್ತಾರೋ ಅವರನ್ನು ನಿಸ್ವಾರ್ಥಿಗಳು ಎಂದು ಕರೆಯುತ್ತಾರೆಂದು ಮೋದಿ ಹೇಳಿದರು. ಇದು ಕೇವಲ ಯಾವುದೇ ವ್ಯಕ್ತಿಗೆ ಮಾತ್ರವಲ್ಲದೇ, ರಾಷ್ಟ್ರಗಳಿಗೂ ಅನ್ವಯಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.