Site icon Vistara News

ದೇಶಕ್ಕೆ ಮನಮೋಹನ್‌ ಸಿಂಗ್‌ ಕೊಡುಗೆ ಅಪಾರ; ರಾಜ್ಯಸಭೆಯಲ್ಲಿ ಮೋದಿ ಬಣ್ಣನೆ

Elections are near Says PM Narendra Modi at 17th lok Sabha

ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಆ ಪಕ್ಷದ ನಾಯಕರನ್ನು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ (ಫೆಬ್ರವರಿ 8) ರಾಜ್ಯಸಭೆಯಲ್ಲಿ (Rajya Sabha) ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (Dr Manmohan Singh) ಅವರನ್ನು ಹೊಗಳಿದ್ದಾರೆ. “ದೇಶಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅವರ ಕೊಡುಗೆಯನ್ನು ನಾವಿಂದು ಸ್ಮರಿಸಬೇಕಾಗಿದೆ” ಎಂದು ನರೇಂದ್ರ ಮೋದಿ ಹೇಳಿದರು.

ಡಾ.ಮನಮೋಹನ್‌ ಸಿಂಗ್‌ ಸೇರಿ ರಾಜ್ಯಸಭೆಯ ಹಲವು ಸದಸ್ಯರು ನಿವೃತ್ತರಾಗುತ್ತಿರುವ ಕಾರಣ, ಅವರಿಗೆ ಮೋದಿ ಅವರು ಭಾಷಣದ ಮೂಲಕ ಬೀಳ್ಕೊಡುಗೆ ನೀಡಿದರು. “ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರು ಸುದೀರ್ಘವಾಗಿ ದೇಶಕ್ಕೆ, ಸದನಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅವರ ಉಪಯುಕ್ತ ಮಾರ್ಗದರ್ಶನವು ದೇಶ, ಸದನವನ್ನು ಮುನ್ನಡೆಸಿದೆ. ಅವರನ್ನು ನಾವು ಎಂದಿಗೂ ಸ್ಮರಿಸೋಣ” ಎಂದು ಮೋದಿ ಹೇಳಿದರು.

“ಸದನದಲ್ಲಿ ಯಾವುದೇ ನಾಯಕರ ಕೊಡುಗೆ ಚರ್ಚೆಯಾಗಲಿ. ಆಗೆಲ್ಲ ನಾವು ಡಾ.ಮನಮೋಹನ್‌ ಸಿಂಗ್‌ ಅವರ ಕೊಡುಗೆಯನ್ನು ಕೂಡ ಸ್ಮರಿಸಬೇಕು. ರಾಜ್ಯಸಭೆಯಲ್ಲಿರುವ ಸದಸ್ಯರು, ಮುಂದೆ ಆಗಮಿಸುವ ಸದಸ್ಯರು ಮನಮೋಹನ್‌ ಸಿಂಗ್‌ ಅವರ ಆದರ್ಶ, ಮಾರ್ಗದರ್ಶನವನ್ನು ಪಾಲಿಸಬೇಕು. ಇವರೆಲ್ಲರಿಗೂ ಮನಮೋಹನ್‌ ಸಿಂಗ್‌ ಅವರು ಮಾರ್ಗಸೂಚಿಯಾಗಿದ್ದಾರೆ” ಎಂದು ಹೇಳಿದರು.

“ಕಳೆದ ಬಾರಿ ಮನಮೋಹನ್‌ ಸಿಂಗ್‌ ಅವರು ವ್ಹೀಲ್‌ಚೇರ್‌ನಲ್ಲಿ ರಾಜ್ಯಸಭೆಗೆ ಬಂದು ಮತದಾನ ಮಾಡಿದರು. ರಾಜ್ಯಸಭೆ ಸದಸ್ಯರಾಗಿ ಅವರು ಎಂತಹ ಬದ್ಧತೆ ಹೊಂದಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹಾಗಾಗಿ, ಮನಮೋಹನ್‌ ಸಿಂಗ್‌ ಅವರು ಮಾದರಿ ಎನಿಸುತ್ತಾರೆ. ಒಬ್ಬ ಸಂಸದ ತನ್ನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದಕ್ಕೆ ಅವರು ನಿದರ್ಶನ” ಎಂದು ಮೋದಿ ಬಣ್ಣಿಸಿದರು.

ಇದನ್ನೂ ಓದಿ: Narendra Modi: ‘ಇಂಥ ಅವಕಾಶ ಮತ್ತೆ ಸಿಗಲಾರದು….’ ಖರ್ಗೆ ಕಾಲೆಳೆದ ಪ್ರಧಾನಿ ನರೇಂದ್ರ ಮೋದಿ

ರಾಜ್ಯಸಭೆಯಿಂದ ಸುಮಾರು 56 ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಹಾಗಾಗಿ, ಗುರುವಾರ ಸಂಜೆ ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್‌ ಅವರ ನಿವಾಸದಲ್ಲಿ ರಾಜ್ಯಸಭೆ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಡಾ.ಮನಮೋಹನ್‌ ಸಿಂಗ್‌ ಅವರ ಅವಧಿಯು ಏಪ್ರಿಲ್‌ನಲ್ಲಿ ಮುಗಿಯಲಿದೆ. ಈಗಾಗಲೇ ಚುನಾವಣೆ ಆಯೋಗವು ರಾಜ್ಯಸಭೆ ಚುನಾವಣೆ ದಿನಾಂಕ ಘೋಷಿಸಿದೆ. ಫೆಬ್ರವರಿ 27ರಂದು 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version