ಗ್ವಾಲಿಯರ್: ನಮೀಬಿಯಾದಿಂದ ಭಾರತಕ್ಕೆ ಬಂದ ಎಂಟು ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಚೀತಾಗಳಿದ್ದ ಪಂಜರದ ಬಾಗಿಲನ್ನು ಪ್ರಧಾನಿ ಮೋದಿ ತೆರೆಯುತ್ತಿದ್ದಂತೆ ಒಂದೊಂದಾಗಿ ಹೊರಬಂದು ಮೈಮುರಿದವು! ಅದ್ಯಾವುದೋ ಅಪರಿಚಿತ ಜಾಗಕ್ಕೆ ಬಂದಿದ್ದು ಅವುಗಳಿಗೂ ಗೊತ್ತಾದಂತಿತ್ತು. ಚೀತಾಗಳಿದ್ದ ಪಂಜರದ ಬಾಗಿಲು ಬೇಲಿಯಾಚೆಗೇ ಇತ್ತು. ಮೇಲ್ಭಾಗದಲ್ಲಿದ್ದ ಅದರ ಚಿಲಕವನ್ನು ನರೇಂದ್ರ ಮೋದಿ ತೆರೆದರು. ಸುರಕ್ಷತೆ ದೃಷ್ಟಿಯಿಂದ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಹೀಗೆ ಚಿರತೆಗಳು ಒಂದೊಂದಾಗಿ ಪಂಜರದಿಂದ ಹೊರಬಿದ್ದು ರಾಷ್ಟ್ರೀಯ ಉದ್ಯಾನವನದಲ್ಲಿ ಹೆಜ್ಜೆಯಿಡುತ್ತ ಹೋಗುವುದನ್ನು ನರೇಂದ್ರ ಮೋದಿ ವೀಕ್ಷಿಸಿದರು, ಅಷ್ಟೇ ಅಲ್ಲ, ಫೋಟೋ ಕ್ಲಿಕ್ಕಿಸಿ ಖುಷಿಪಟ್ಟರು. ಈ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದ್ದರು.
ನಮೀಬಿಯಾದಿಂದ ಮೂರು ಗಂಡು ಮತ್ತು ಐದು ಹೆಣ್ಣು ಸೇರಿ ಎಂಟು ಚೀತಾಗಳನ್ನು ಹೊತ್ತ ಸರಕು ವಿಮಾನ ಶನಿವಾರ ಮುಂಜಾನೆ 7.45ರ ಹೊತ್ತಿಗೆ ಗ್ವಾಲಿಯರ್ನಲ್ಲಿ ಲ್ಯಾಂಡ್ ಆಯಿತು. ಅಲ್ಲಿಂದ ಏರ್ಫೋರ್ಸ್ನ ಹೆಲಿಕಾಪ್ಟರ್ ಮೂಲಕ ಕುನೋ ನ್ಯಾಷನಲ್ ಪಾರ್ಕ್ಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಪ್ರಧಾನಿ ಮೋದಿ ಕೂಡ ಮಧ್ಯಪ್ರದೇಶ ತಲುಪಿದ್ದರು. ಅವರನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸ್ವಾಗತಿಸಿದರು.
ಚೀತಾಗಳನ್ನು ಉದ್ಯಾನವನಕ್ಕೆ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಚೀತಾಗಳು ಈಗಷ್ಟೇ ಹೊಸ ಮನೆಗೆ ಬಂದಿವೆ. ಅವಕ್ಕೆ ಇಲ್ಲಿಗೆ ಹೊಂದಿಕೊಳ್ಳಲು ಕೆಲ ಸಮಯ ಬೇಕು. ಈ ಪ್ರದೇಶದ ಬಗ್ಗೆ ಅವುಗಳಿಗೆ ಏನೂ ಗೊತ್ತಿಲ್ಲ. ಹೀಗಾಗಿ ಒಮ್ಮೆಲೇ ಪ್ರವಾಸಿಗರಿಗೆ ಚೀತಾಗಳನ್ನು ನೋಡಲು ಅವಕಾಶ ಇರುವುದಿಲ್ಲ. ಕೆಲವು ತಿಂಗಳುಗಳ ಬಳಿಕವಷ್ಟೇ ಜನರು ಚೀತಾಗಳನ್ನು ನೋಡಬಹುದು. ಈ ಚೀತಾಗಳ ಸಂತತಿ ಭಾರತದಲ್ಲಿ ನಿರ್ನಾಮಗೊಂಡಿದೆ ಎಂದು 1952ರಲ್ಲೇ ಘೋಷಿಸಲಾಯಿತು. ಅಂದಿನಿಂದಲೂ ಅವುಗಳ ಸಂತತಿ ಪುನರುಜ್ಜೀವನಗೊಳಿಸಲು ಯಾವುದೇ ಗಟ್ಟಿ ಪ್ರಯತ್ನಗಳೂ ನಡೆಯಲಿಲ್ಲ. ನಾವೀಗ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡುತ್ತಿರುವ ಹೊತ್ತಲ್ಲಿ, ಚೀತಾಗಳ ಸಂತತಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದೇವೆ’ ಎಂದು ಹೇಳಿದರು.
ಇದನ್ನೂ ಓದಿ: ಮುಂಜಾನೆಯೇ ಭಾರತದಲ್ಲಿ ಲ್ಯಾಂಡ್ ಆದ 8 ಚೀತಾಗಳು; ಮಧ್ಯಪ್ರದೇಶ ತಲುಪಿದ ಪ್ರಧಾನಿ ಮೋದಿ