Site icon Vistara News

ಮೋದಿಯಿಂದಾಗಿ ಕಾಂಗ್ರೆಸ್‌ ಭ್ರಷ್ಟಾಚಾರ ಮುಕ್ತ; ಜೈರಾಮ್‌ ರಮೇಶ್‌ ಮಾತಿನ ಅರ್ಥವೇನು?

Jairam Ramesh

ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ಕಾಂಗ್ರೆಸ್‌ನ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆಯಾಗಿ ಕೆಲವೊಂದಿಷ್ಟು ನಾಯಕರು ಟಿಕೆಟ್‌ ಕೂಡ ಗಿಟ್ಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌ (Jairam Ramesh) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಯಮಿ, ಕಾಂಗ್ರೆಸ್‌ ನಾಯಕ ನವೀನ್‌ ಜಿಂದಾಲ್‌ (Naveen Jindal) ಅವರು ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಮಾತನಾಡಿದ ಜೈರಾಮ್‌ ರಮೇಶ್‌, “ನರೇಂದ್ರ ಮೋದಿ ಅವರಿಂದಾಗಿ ಕಾಂಗ್ರೆಸ್‌ ಈಗ ಭ್ರಷ್ಟರಿಂದ ಮುಕ್ತವಾಗಿದೆ” ಎಂದು ಹೇಳಿದ್ದಾರೆ.

“ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮುಕ್ತ ಭಾರತದ ಕರೆ ನೀಡಿದ್ದರು. ಆದರೆ, ಅವರು ಕಾಂಗ್ರೆಸ್‌ಅನ್ನು ಭ್ರಷ್ಟರಿಂದ ಮುಕ್ತಿಗೊಳಿಸುತ್ತಿದ್ದಾರೆ. ಇ.ಡಿ ಹಾಗೂ ಸಿಬಿಐ ತನಿಖಾ ಸಂಸ್ಥೆಗಳನ್ನು ದೊಡ್ಡ ವಾಷಿಂಗ್‌ ಮಷೀನ್‌ಗಳನ್ನಾಗಿ ನರೇಂದ್ರ ಮೋದಿ ಅವರು ಬಳಸಿಕೊಳ್ಳುತ್ತಾರೆ. ಕಾಂಗ್ರೆಸ್‌ನಲ್ಲಿರುವ ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ನರೇಂದ್ರ ಮೋದಿ ಅವರು, ವಾಷಿಂಗ್‌ ಮೂಲಕ ಅವರನ್ನು ಶುಚಿಗೊಳಿಸುತ್ತಾರೆ” ಎಂದು ಟಾಂಗ್‌ ಕೊಟ್ಟಿದ್ದಾರೆ.

ಬಿಜೆಪಿ ಸೇರಿದ ನವೀನ್‌ ಜಿಂದಾಲ್

ನವೀನ್‌ ಜಿಂದಾಲ್‌ ಕುರಿತು ಮಾತನಾಡಿದ ಜೈರಾಮ್‌ ರಮೇಶ್‌, “ಕಳೆದ 10 ವರ್ಷಗಳಿಂದ ನವೀನ್‌ ಜಿಂದಾಲ್‌ ಅವರು ಪಕ್ಷಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಈಗ ಅವರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂಬುದಾಗಿ ಹೇಳುವುದೇ ದೊಡ್ಡ ತಮಾಷೆ” ಎಂದು ಕುಟುಕಿದರು.

ಕಾಂಗ್ರೆಸ್‌ ನಾಯಕರಾಗಿದ್ದ ಉದ್ಯಮಿ ನವೀನ್‌ ಜಿಂದಾಲ್‌ ಅವರು ಭಾನುವಾರ (ಮಾರ್ಚ್‌ 24) ಸಂಜೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿದರು. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ (Vinod Tawde) ಅವರ ನೇತೃತ್ವದಲ್ಲಿ ನವೀನ್‌ ಜಿಂದಾಲ್‌ ಅವರು ಬಿಜೆಪಿ ಸೇರ್ಪಡೆಯಾದರು. ಇದಾದ ಒಂದೆರಡು ಗಂಟೆಯಲ್ಲಿಯೇ ಅವರಿಗೆ ಬಿಜೆಪಿಯು ಹರಿಯಾಣದ ಕುರುಕ್ಷೇತ್ರದಿಂದ ಟಿಕೆಟ್‌ ನೀಡಿದೆ.

ಇದನ್ನೂ ಓದಿ: ಗಿಫ್ಟ್‌ ಬೇಡ, ಮೋದಿಗೆ ಮತ ನೀಡಿ; ವೆಡ್ಡಿಂಗ್ ಕಾರ್ಡ್‌ನಲ್ಲಿ ವರನ ಅಪ್ಪನಿಂದ ವಿಶೇಷ ಮನವಿ!

ಜಿಂದಾಲ್‌ ಸ್ಟೀಲ್‌ ಹಾಗೂ ಪವರ್‌ ಕಂಪನಿಯ ಚೇರ್ಮನ್‌ ಆಗಿರುವ ನವೀನ್‌ ಜಿಂದಾಲ್‌ ಅವರು ಇದೇ ಕುರುಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. “ನರೇಂದ್ರ ಮೋದಿ ಅವರ ನಾಯಕತ್ವದ, ದೇಶಕ್ಕೆ ನಾನೂ ಕೊಡುಗೆ ನೀಡಬೇಕು ಎಂಬ ಮನೋಭಾವದಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ” ಎಂದು ನವೀನ್‌ ಜಿಂದಾಲ್‌ ಅವರು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version