ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ರೇಡಿಯೊ ಸರಣಿಯ 102ನೇ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ದೇಶದ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದ ಪ್ರಮುಖ ಅಂಶಗಳು (Mann Ki Baat Live Updates) ಇಲ್ಲಿವೆ.
ಮನ್ ಕೀ ಬಾತ್ ಮುಕ್ತಾಯ
ನರೇಂದ್ರ ಮೋದಿ ಅವರು ದೇಶದ ಜನತೆಗೆ ಹಲವು ಸಲಹೆಗಳನ್ನು ನೀಡುವ ಮೂಲಕ ಮನ್ ಕೀ ಬಾತ್ ಮುಗಿಸಿದರು. ಮುಂಗಾರು ಆರಂಭವಾಗಿದೆ. ಎಲ್ಲರೂ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ, ನಿತ್ಯವೂ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ಈ ಬಾರಿಯ ಮನ್ ಕೀ ಬಾತ್ ಸುದೀರ್ಘವಾಗಿರದೆ, ಕೆಲವೇ ನಿಮಿಷಗಳಲ್ಲಿ ಮೋದಿ ಮಾತು ಮುಗಿಸಿದರು.
ಎಲ್ಲರೂ ಯೋಗ ಮಾಡಿ ಎಂದು ಮೋದಿ ಕರೆ
ಜೂನ್ 21ರಂದು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲರೂ ಯೋಗ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. “ಜೂನ್ 21ರಂದು ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನಾನು ವಿಶ್ವಸಂಸ್ಥೆಯಲ್ಲಿ ಯೋಗ ಮಾಡುತ್ತೇನೆ. ದೇಶದ ಪ್ರತಿಯೊಬ್ಬರೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಿತ್ಯವೂ ಯೋಗ ಮಾಡುವುದರಿಂದ ಜೀವನದಲ್ಲಿ ಪರಿವರ್ತನೆ ಕಾಣಬಹುದು” ಎಂದು ಸಲಹೆ ನೀಡಿದರು.
ಏಷ್ಯಾ ಕಪ್ ಗೆದ್ದ ಮಹಿಳಾ ತಂಡಕ್ಕೆ ಅಭಿನಂದನೆ
ಮಹಿಳೆಯರ ಜ್ಯೂನಿಯರ್ ಏಷ್ಯಾ ಕಪ್‌ನಲ್ಲಿ ಭಾರತದ ಮಹಿಳಾ ತಂಡವು ಚಾಂಪಿಯನ್ ಆಗಿರುವುದಕ್ಕೆ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಯುವಕರು ಎಲ್ಲ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರದಲ್ಲಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಮೋದಿ ಹೇಳಿದರು.
ಬಾರಾಮುಲ್ಲಾದಲ್ಲಿ ಕ್ಷೀರ ಕ್ರಾಂತಿಗೆ ಮೋದಿ ಮೆಚ್ಚುಗೆ
ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಕ್ಷೀರ ಕ್ರಾಂತಿ ಉಂಟಾಗಿರುವುದಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಬಾರಾಮುಲ್ಲಾದಲ್ಲಿ ಹಾಲಿನ ಸಮಸ್ಯೆ ಇತ್ತು. ಆದರೆ, ಇಶ್ರತ್ ಎಂಬ ಸಹೋದರಿಯು ಡೇರಿ ಸ್ಥಾಪನೆ ಮಾಡಿ ನಿತ್ಯ 150 ಲೀಟರ್ ಹಾಲು ಉತ್ಪಾದನೆ ಮಾಡಿ, ಮಾರಾಟ ಮಾಡುತ್ತಿದ್ದಾರೆ. ಇಂತಹ ಹಲವು ಸಣ್ಣ ಕ್ರಾಂತಿಗಳಿಂದಾಗಿ ಬಾರಾಮುಲ್ಲಾದಲ್ಲಿ ಹಾಲಿನ ಸಮಸ್ಯೆ ಬಗೆಹರಿದಿದೆ” ಎಂದು ಮೋದಿ ಹೇಳಿದರು.
ಕ್ಷಯರೋಗ ನಿರ್ಮೂಲನೆಗೆ ಒಗ್ಗೂಡೋಣ
ದೇಶದ ಎಲ್ಲರೂ ಕ್ಷಯರೋಗ ನಿರ್ಮೂಲನೆಗೆ ಒಗ್ಗೂಡಿ ಶ್ರಮಿಸೋಣ. 2025ರ ವೇಳೆಗೆ ದೇಶವನ್ನ ಕ್ಷಯರೋಗ ಮುಕ್ತ ಮಾಡುವ ಗುರಿ ಹೊಂದಿದ್ದೇವೆ. ಹಿಮಾಚಲ ಪ್ರದೇಶದ 8 ವರ್ಷದ ಬಾಲಕಿ ನಳಿನಿಯು ತನ್ನ ಪಿಗ್ಗಿ ಬಾಕ್ಸ್‌ನ ಹಣ ಖರ್ಚು ಮಾಡಿ ಟಿ ಬಿ ವಿರುದ್ಧ ಹೋರಾಡಲು ಅಭಿಯಾನ ಆರಂಭಿಸಿದ್ದಾಳೆ. ದೇಶದ ಜನರ ಇಂತಹ ಉತ್ಸಾಹವೇ ಯಾವುದೇ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಹೇಳಿದರು.