ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಲು ಉತ್ತರಾಖಂಡಕ್ಕೆ ತೆರಳಿದ್ದಾರೆ. ಇದೇ ವೇಳೆ ಅವರು ಪಿಥೋರ್‌ಗಢದಲ್ಲಿರುವ ಪಾರ್ವತಿ ಕುಂಡ್ (Parvati Kund) ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಹಿಮದಿಂದ ಕೂಡಿದ ಶಿಖರಗಳಿರುವ ಕಾರಣ ಮೈ ಕೊರೆಯುವ ಚಳಿ ಇದ್ದು, ವಿಶೇಷ ದಿರಸಿನಲ್ಲಿ ನರೇಂದ್ರ ಮೋದಿ ಅವರು ಪಾರ್ವತಿ ಕುಂಡ್‌ಗೆ ತೆರಳಿದರು. ಇದೇ ವೇಳೆ ಪೂಜೆ ಸಲ್ಲಿಸಿದ ಬಳಿಕ ಅವರು ಹಿಮಚ್ಛಾದಿತ ಬೆಟ್ಟಗಳ ಮಧ್ಯೆ ಕೆಲ ನಿಮಿಷಗಳ ಕಾಲ ಧ್ಯಾನ ಮಾಡಿದರು.
ಪೂಜೆ, ಧ್ಯಾನದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೊಗಳನ್ನು ಹಂಚಿಕೊಂಡಿರುವ ನರೇಂದ್ರ ಮೋದಿ, “ದೇವಭೂಮಿ ಉತ್ತರಾಖಂಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಹಲವು ಯೋಜನೆಗಳಿಗೆ ಅಡಿಗಲ್ಲು, ಚಾಲನೆ ನೀಡಲು ಇಲ್ಲಿಗೆ ಆಗಮಿಸಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ರಸ್ತೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಹಾಗೆಯೇ, ಗುಂಜ್ ಗ್ರಾಮದಲ್ಲಿರುವ ಜಾಗೇಶ್ವರ ಧಾಮಕ್ಕೂ ಪ್ರಧಾನಿ ಭೇಟಿ ನೀಡಿದ್ದು, ಅಲ್ಲೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಡೀ ದಿನ ಅವರು ಉತ್ತರಾಖಂಡದಲ್ಲಿಯೇ ಕಾಲ ಕಳೆಯಲಿದ್ದಾರೆ.
ಇದನ್ನೂ ಓದಿ: Ram Mandir: 2024ರ ಜನವರಿ 22ಕ್ಕೆ ರಾಮಮಂದಿರ ಲೋಕಾರ್ಪಣೆ; ಮೋದಿಯಿಂದಲೇ ಚಾಲನೆ, 4 ದಿನ ಪೂಜೆ
ಜೋಲಿಂಗ್‌ಕಾಂಗ್‌ನಲ್ಲಿರುವ ಆದಿ ಕೈಲಾಸ ಗಿರಿ ಮೂಲಕ ಅವರು ಉತ್ತರಾಖಂಡ ಭೇಟಿ ಆರಂಭಿಸಿದ್ದಾರೆ. ಗಡಿಯಲ್ಲಿ ಚೀನಾ ಆಗಾಗ ಉಪಟಳ ಮಾಡುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಭೇಟಿಯು ಪ್ರಾಮುಖ್ಯತೆ ಪಡೆದಿದೆ.