ನವದೆಹಲಿ: ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕದ ಶಿಫಾರಸು ಮಾಡುವ ಕೊಲಿಜಿಯಂ ಪದ್ಧತಿ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯೆ ಸಂಘರ್ಷ ಏರ್ಪಟ್ಟಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಶನಿವಾರ ಮಹಾರಾಷ್ಟ್ರ ಹಾಗೂ ಗೋವಾ ಬಾರ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಚಂದ್ರಚೂಡ್, “ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ಜಡ್ಜ್‌ಮೆಂಟ್ ಲಭ್ಯವಾಗುವ ವ್ಯವಸ್ಥೆ ಇರಬೇಕು” ಎಂದಿದ್ದರು. ಇದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
“ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳು ಲಭ್ಯವಾಗುವ ದಿಸೆಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಅವರು ಹೇಳಿದ್ದಾರೆ. ಹಾಗೆಯೇ, ಇದಕ್ಕಾಗಿ ತಂತ್ರಜ್ಞಾನದ ಬಳಕೆ ಮಾಡಬೇಕು ಎಂಬ ಸಲಹೆ ನೀಡಿದ್ದಾರೆ. ಇದು ಮಹೋನ್ನತ ಯೋಚನೆಯಾಗಿದ್ದು, ಇದರಿಂದ ಯುವಕರು ಸೇರಿ ತುಂಬ ಜನರಿಗೆ ಅನುಕೂಲವಾಗಲಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
“ಭಾರತದಾದ್ಯಂತ ಪ್ರಾದೇಶಿಕ ಭಾಷೆಗಳು ಇರುವುದರಿಂದ ಇವುಗಳ ಏಳಿಗೆ, ಸ್ಥಳೀಯ ಭಾಷೆಗಳಲ್ಲಿ ಸೇವೆಗಳ ಲಭ್ಯತೆ ಸೇರಿ ಹಲವು ದಿಸೆಯಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದಿದ್ದಾರೆ. ಕೊಲಿಜಿಯಂ ವಿಷಯದಲ್ಲಿ ಕೇಂದ್ರ ಹಾಗೂ ನ್ಯಾಯಾಂಗ ಮಧ್ಯೆ ಸಂಘರ್ಷ ಉಂಟಾಗಿದೆ. ಕೊಲಿಜಿಯಂ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಕ್ಷಿಪ್ರವಾಗಿ ಅನುಮೋದನೆ ನೀಡುತ್ತಿಲ್ಲ ಎಂದು ಹಲವು ಬಾರಿ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅತ್ತ, ಕೇಂದ್ರ ಸರ್ಕಾರವು ಸಮಯಕ್ಕೆ ಸರಿಯಾಗಿ ಅನುಮೋದನೆ ದೊರೆತಿದೆ ಎಂದು ಸ್ಪಷ್ಟನೆ ನೀಡಿದೆ. ಆದರೂ, ಮುಸುಕಿನ ಗುದ್ದಾಟ ಮುಂದುವರಿದಿದೆ.
ಇದನ್ನೂ ಓದಿ | Collegium | 2022ರಲ್ಲಿ ಅತಿ ಹೆಚ್ಚು ಜಡ್ಜ್‌ಗಳ ನೇಮಕ, ಕೊಲಿಜಿಯಂ ಬಿಕ್ಕಟ್ಟಿನ ಮಧ್ಯೆಯೇ ಕೇಂದ್ರ ಸರ್ಕಾರ ಸ್ಪಷ್ಟನೆ