ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಿರಂತರವಾಗಿ ಮನ್ ಕೀ ಬಾತ್ (Mann Ki Baat) ರೇಡಿಯೋ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ರೇಡಿಯೋ ಕಾರ್ಯಕ್ರಮದ ಮೂಲಕ ಅವರು ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಾರೆ. ಹಾಗಾಗಿ, ಮನ್ ಕೀ ಬಾತ್ ರೇಡಿಯೋ ಸರಣಿಯು 110 ಕಾರ್ಯಕ್ರಮಗಳನ್ನು ಪೂರೈಸಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಮೂರು ತಿಂಗಳು ವಿರಾಮ ನೀಡಿದ್ದಾರೆ. ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಮೋದಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿಯೇ ಮೋದಿ ಅವರು ಈ ಕುರಿತು ಘೋಷಣೆ ಮಾಡಿದ್ದಾರೆ. “ಮನ್ ಕೀ ಬಾತ್ ಕಾರ್ಯಕ್ರಮವು ಇದುವರೆಗೆ 110 ಎಪಿಸೋಡ್‌ಗಳನ್ನು ಪೂರೈಸಿದೆ. ಜನರಿಂದ, ಜನರಿಗಾಗಿಯೇ ನಡೆಯುತ್ತಿರುವ ರೇಡಿಯೋ ಕಾರ್ಯಕ್ರಮ ಇದಾಗಿದೆ. ಆದರೆ, ದೇಶದಲ್ಲಿ ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ರಾಜನೀತಿಗೆ ಗೌರವ ಕೊಡುವ ದಿಸೆಯಲ್ಲಿ ಮೂರು ತಿಂಗಳವರೆಗೆ ನಾನು ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ವಿರಾಮ ನೀಡುತ್ತಿದ್ದೇನೆ” ಎಂದು ತಿಳಿಸಿದರು.
A few days ago the Election Commission has started a campaign – ‘Mera Pehla Vote – Desh Ke Liye’. I would urge first time voters to vote in record numbers: PM @narendramodi #MannKiBaat pic.twitter.com/Lfx5r7OeMU
— PMO India (@PMOIndia) February 25, 2024
“ಮನ್ ಕೀ ಬಾತ್ ಕಾರ್ಯಕ್ರಮವು ಮೂರು ತಿಂಗಳು ಮಾತ್ರ ಇರುವುದಿಲ್ಲ. ನಾನು ನಿಮಗೆ 111ನೇ ಕಾರ್ಯಕ್ರಮದಲ್ಲಿ ಸಿಗುತ್ತೇನೆ. ಮೂರು ತಿಂಗಳು ಕಾರ್ಯಕ್ರಮ ಇರದಿದ್ದರೂ, ದೇಶದ ಚಟುವಟಿಕೆಗಳು, ಸೇವೆಗಳು ನಿಲ್ಲುವುದಿಲ್ಲ. ಹಾಗಾಗಿ, ಯುವಕರು ಸೇರಿ ಎಲ್ಲರೂ ನಿಮ್ಮ ಸುತ್ತಮುತ್ತಲಿನ ಸಕಾರಾತ್ಮಕ ಅಂಶಗಳನ್ನು ಮನ್ ಕೀ ಬಾತ್ ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ಮನ್ ಕೀ ಬಾತ್ ಕಾರ್ಯಕ್ರಮದ ವಿಡಿಯೊ ತುಣುಕುಗಳನ್ನು ಕೂಡ ಶೇರ್ ಮಾಡಿಕೊಂಡು ಕಾರ್ಯಕ್ರಮವನ್ನು ಜೀವಂತವಾಗಿರಿಸಿ” ಎಂದು ಕರೆ ನೀಡಿದರು.
#WATCH | People listen to Prime Minister Narendra Modi's monthly radio programme 'Mann Ki Baat', at Jamia Millia Islamia University, in Delhi. pic.twitter.com/ZWjTrVLGjU
— ANI (@ANI) February 25, 2024
ಇದನ್ನೂ ಓದಿ: ಮನ್ ಕೀ ಬಾತ್‌ನಲ್ಲಿ ಬಾಗಲಕೋಟೆಯ ವೆಂಕಪ್ಪಗೆ ಮೋದಿ ಮೆಚ್ಚುಗೆ; ಇವರ ಕೊಡುಗೆ ಏನು?
ಮೋದಿ ಮನ್ ಕೀ ಬಾತ್ ಹೈಲೈಟ್ಸ್
- ದೇಶದಲ್ಲಿ ನಾರಿಶಕ್ತಿಯು ಪ್ರತಿಯೊಂದು ಕ್ಷೇತ್ರಗಳಲ್ಲೂ ಪ್ರಜ್ವಲಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲೂ ಹೆಣ್ಣುಮಕ್ಕಳು ಡ್ರೋನ್ ಹಾರಿಸುತ್ತಿದ್ದಾರೆ. ನಮೋ ಡ್ರೋನ್ ದೀದಿ ಕಾರ್ಯಕ್ರಮ ಯಶಸ್ವಿಯಾಗಿದೆ.
- ಡ್ರೋನ್ ಮೂಲಕ ಕೃಷಿ, ಸಾವಯವ ಕೃಷಿ, ಜಲ ಸಂರಕ್ಷಣೆಯಲ್ಲಿ ಉತ್ತರ ಪ್ರದೇಶ ಯುವತಿ ಸುನೀತಾ, ಮಹಾರಾಷ್ಟ್ರದ ಕಲ್ಯಾಣಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.
- ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ವೃತ್ತಿಯಲ್ಲಿ ತೊಡಗಿದ್ದ ಜಯಂತಿ ಮಹಾಪಾತ್ರ, ವಿರೇನ್ ಸಾಹು ದಂಪತಿಯು ಒಡಿಶಾದಲ್ಲಿ ಕುರಿ ಸಾಕಣೆ ಮಾಡಿದ್ದಾರೆ. ಮಾಣಿಕಸ್ತು ಆಡು ಬ್ಯಾಂಕ್ ಸ್ಥಾಪಿಸಿ, ರೈತರು ಆಡು, ಮೇಕೆಗಳ ಸಾಕಣೆಗೆ ಉತ್ತೇಜನ ನೀಡಿದ್ದಾರೆ.
- ಭಾರತವು ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳಿಂದ ಶ್ರೀಮಂತವಾಗಿದೆ. ಬೇರೆಯವರಿಗೆ ಸಹಾಯ ಮಾಡುವುದನ್ನೂ ನಾವು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ.
- ಮೊದಲ ಬಾರಿ ಮತದಾನ ಮಾಡುತ್ತಿರುವವರು ದೇಶದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಪ್ಪದೆ ಮತದಾನ ಮಾಡಬೇಕು. ದೇಶದ ಗಣ್ಯರು, ಸೆಲೆಬ್ರಿಟಿಗಳು ಕೂಡ ಈ ಕುರಿತು ಜಾಗೃತಿ ಮೂಡಿಸಬೇಕು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ