ಹೈದರಾಬಾದ್: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಹಲವು ನಾಯಕರ ಭಾಷಣಗಳು, ಆರೋಪಗಳು, ವಾಗ್ದಾಳಿಗಳು ತೀಕ್ಷ್ಣ ಸ್ವರೂಪ ಪಡೆದಿವೆ. ಇನ್ನು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಂತೂ ಮುಕೇಶ್ ಅಂಬಾನಿ (Mukesh Ambani), ಗೌತಮ್ ಅದಾನಿ (Gautam Adani) ಹೆಸರು ಪ್ರಸ್ತಾಪಿಸಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಮೋದಿ ಈಗ ಅಂಬಾನಿ, ಅದಾನಿ ಹೆಸರು ಹೇಳಿಕೊಂಡೇ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. “ಚುನಾವಣೆಗಾಗಿ ಕಾಂಗ್ರೆಸ್‌ಗೆ ಅಂಬಾನಿ ಹಾಗೂ ಅದಾನಿಯಿಂದ ಟೆಂಪೋಗಟ್ಟಲೆ ಹಣ ಸಂದಾಯವಾಗಿದೆ” ಎಂದು ತಿರುಗುಬಾಣ ಬಿಟ್ಟಿದ್ದಾರೆ.
ತೆಲಂಗಾಣದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದರು. “ಕಾಂಗ್ರೆಸ್ ಮಹಾರಾಜ (ರಾಹುಲ್ ಗಾಂಧಿ) ಈಗ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ, ಚುನಾವಣೆಗಾಗಿ ಉದ್ಯಮಿಗಳಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಕಾಳಧನವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಇದೇ ಕಾರಣಕ್ಕಾಗಿ ರಾಹುಲ್ ಗಾಂಧಿ ಅವರು ಅಂಬಾನಿ, ಅದಾನಿ ಬಗ್ಗೆ ಈಗ ಮಾತನಾಡುತ್ತಿಲ್ಲ” ಎಂದು ಟೀಕಿಸಿದರು.
Why has Shahzade Ji stopped talking of Ambani and Adani in this election all of sudden? People are smelling a secret deal… pic.twitter.com/y5A87E6dfi
— Narendra Modi (@narendramodi) May 8, 2024
“ಕಳೆದ ಐದು ವರ್ಷಗಳಿಂದ ರಾಹುಲ್ ಗಾಂಧಿ ಅವರು ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದರು. ರಾಫೆಲ್ ವಿಚಾರವಾಗಿ ಮಾಡಿದ ಆರೋಪವು ನೆಲಕಚ್ಚಿತು. ಅದಾದ ಬಳಿಕ ಐವರು ಉದ್ಯಮಿಗಳು, ಐವರು ಉದ್ಯಮಿಗಳು ಎಂದು ಪರೋಕ್ಷ ಆರೋಪ ಶುರುವಿಟ್ಟುಕೊಂಡರು. ಅದಾದ ಬಳಿಕ ಅಂಬಾನಿ-ಅದಾನಿ ಎಂದು ನೇರವಾಗಿ ಆರೋಪ ಮಾಡಿದರು. ಆದರೆ, ಚುನಾವಣೆ ಘೋಷಣೆಯಾಗುತ್ತಲೇ ರಾಹುಲ್ ಗಾಂಧಿ ಅವರು ಅಂಬಾನಿ ಹಾಗೂ ಅದಾನಿ ಹೆಸರೇ ಎತ್ತುತ್ತಿಲ್ಲ. ರಾಹುಲ್ ಗಾಂಧಿ ಏಕೆ ಈಗ ರಾತ್ರೋರಾತ್ರಿ ಬದಲಾದರು? ಏಕೆ ಅವರು ಅಂಬಾನಿ-ಅದಾನಿ ಹೆಸರು ಹೇಳುತ್ತಿಲ್ಲ” ಎಂದು ಪ್ರಶ್ನಿಸಿದರು.
ಅಂಬಾನಿ-ಅದಾನಿ ಹೆಸರಿಟ್ಟುಕೊಂಡು ಟೀಕೆ ಮಾಡುತ್ತಿದ್ದ ರಾಹುಲ್ ಗಾಂಧಿ ಅವರಿಗೆ ಈಗ ಮೋದಿ ಅವರು ಉದ್ಯಮಿಗಳ ಹೆಸರು ಪ್ರಸ್ತಾಪಿಸಿಯೇ ಟೀಕಿಸಿದ್ದಾರೆ. “ನರೇಂದ್ರ ಮೋದಿ ಅವರು ಕೆಲವು ಉದ್ಯಮಿಗಳಿಗೆ ಮಾತ್ರ ನೆರವು ನೀಡುತ್ತಾರೆ. ಅವರಿಗಾಗಿಯೇ ಅವರು ಆಡಳಿತ ಮಾಡುತ್ತಾರೆ. ಕೇಂದ್ರ ಸರ್ಕಾರದ ಹಣವು ಅಂಬಾನಿ-ಅದಾನಿಗೆ ಮಾತ್ರ ಹೋಗುತ್ತದೆ. ಬಡವರಿಗೆ ಮೋದಿ ಸರ್ಕಾರದಿಂದ ಯಾವುದೇ ಉಪಯೋಗವಿಲ್ಲ” ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದರು.
ಇದನ್ನೂ ಓದಿ: PM Modi: ರಾಮಮಂದಿರಕ್ಕೆ ಕಾಂಗ್ರೆಸ್ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ