ನವ ದೆಹಲಿ: ಕಾನೂನು ಮತ್ತು ಸುವ್ಯವಸ್ಥೆ ಎನ್ನುವುದು ಆಯಾ ರಾಜ್ಯಗಳ ಜವಾಬ್ದಾರಿಯೇ ಆಗಿದ್ದರೂ, ಅದು ಇಡೀ ರಾಷ್ಟ್ರದ ಸಮಗ್ರತೆ ಮತ್ತು ಏಕತೆಗೆ ಸಂಬಂಧಪಟ್ಟ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಹರ್ಯಾಣದಲ್ಲಿ ಆಯೋಜಿಸಲಾಗಿರುವ ಚಿಂತನ ಶಿಬಿರವನ್ನು ಉದ್ದೇಶಿಸಿ ವರ್ಚ್ಯುವಲ್ ಭಾಷಣ ಮಾಡಿದ ಅವರು, ‘ಹರ್ಯಾಣದ ಸೂರಜ್ಕುಂಡ್ನಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರ ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆ’ ಎಂದೂ ಅವರು ಹೇಳಿದರು.
ರಾಜ್ಯಗಳು ಪರಸ್ಪರರಿಂದ ಕಲಿಯಬೇಕು. ಒಂದು ರಾಜ್ಯವನ್ನು ನೋಡಿ, ಮತ್ತೊಂದು ರಾಜ್ಯಗಳು ಸ್ಫೂರ್ತಿ ಪಡೆಯಬೇಕು. ದೇಶದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದ ಪ್ರಧಾನಿ ಮೋದಿ ಇದೇ ಹೊತ್ತಲ್ಲಿ ‘ಒಂದು ದೇಶ, ಒಂದೇ ಪೊಲೀಸ್ ಸಮವಸ್ತ್ರ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಹೀಗೆ ರಾಷ್ಟ್ರಾದ್ಯಂತ ಎಲ್ಲ ರಾಜ್ಯಗಳ ಪೊಲೀಸರೂ ಒಂದೇ ಮಾದರಿಯವ ಯೂನಿಫಾರ್ಮ್ ಧರಿಸುವಂತೆ ನಿಯಮ ಜಾರಿ ಸಂಬಂಧ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೂ ಚರ್ಚಿಸಬೇಕು’ ಎಂದು ಹೇಳಿದರು.
ಕೇಂದ್ರ ಭದ್ರತಾ ಏಜೆನ್ಸಿಗಳು ಮತ್ತು ಪೊಲೀಸ್ ಸಶಸ್ತ್ರಪಡೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈಗೀಗ ಕ್ರೈಂಗಳು ಹೆಚ್ಚುತ್ತಿವೆ. ಗಡಿಗಳ ಎಲ್ಲೆ ಮೀರಿ ಕ್ರಿಮಿನಲ್ ಕೆಲಸಗಳು ನಡೆಯುತ್ತಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದರೆ ರಾಜ್ಯ ಮತ್ತು ಕೇಂದ್ರಗಳು ಒಂದಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ಹಾಗೇ, ಕಾನೂನು ಪರಿಪಾಲನೆ ಮಾಡುವ ನಾಗರಿಕರನ್ನು, ಋಣಾತ್ಮಕ ಶಕ್ತಿಗಳಿಂದ ಕಾಪಾಡುವ ಹೊಣೆ ನಮ್ಮದು. ಒಂದು ಸಣ್ಣ ಸುಳ್ಳು ಸುದ್ದಿ ಇಡೀ ದೇಶವನ್ನೇ ಅಲ್ಲೋಲ-ಕಲ್ಲೋಲ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳನ್ನು ನಂಬುವ, ಇನ್ನೊಬ್ಬರಿಗೆ ಫಾರ್ವರ್ಡ್ ಮಾಡುವ ಮೊದಲು ಜನರು ಆ ಬಗ್ಗೆ ಒಂದು ಕ್ಷಣ ಯೋಚಿಸಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದೂ ಪ್ರಧಾನಿ ಹೇಳಿದರು.
ಇದನ್ನೂ ಓದಿ: Vladimir Putin | ಪ್ರಧಾನಿ ಮೋದಿ ಮಹಾನ್ ದೇಶಭಕ್ತ, ಭಾರತಕ್ಕಿದೆ ಅದ್ಭುತ ಭವಿಷ್ಯ ಎಂದ ರಷ್ಯಾ ಅಧ್ಯಕ್ಷ ಪುಟಿನ್