Site icon Vistara News

Narendra Modi: ತಾಯಂದಿರ ದಿನದಂದು ಮೋದಿಗೆ ವಿಶೇಷ ಉಡುಗೊರೆ ಕೊಟ್ಟ ಫ್ಯಾನ್ಸ್; ಏನದು ನೋಡಿ!

Narendra Modi

PM Narendra Modi receives special Mother's Day presents at a rally in Bengal's Hooghly

ಕೋಲ್ಕೊತಾ: ಭಾನುವಾರ (ಮೇ 12) ವಿಶ್ವ ತಾಯಂದಿರ (Mother’s Day) ದಿನ. ಭಾರತ ಸೇರಿ ಜಗತ್ತಿನಾದ್ಯಂತ ಎಲ್ಲರೂ ತಮ್ಮ ತಾಯಂದಿರಿಗೆ ಶುಭ ಕೋರುವ ಮೂಲಕ ಖುಷಿ, ಧನ್ಯತಾ ಭಾವ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪಶ್ಚಿಮ ಬಂಗಾಳದಲ್ಲಿ (West Bengal) ತಾಯಂದಿರ ದಿನದಂದು ವಿಶೇಷ ಉಡುಗೊರೆಗಳು ದೊರೆತಿವೆ. ಹೌದು, ತಾಯಂದಿರ ದಿನದ ಹಿನ್ನೆಲೆಯಲ್ಲಿ ಮೋದಿ ಅವರ ಇಬ್ಬರು ಅಭಿಮಾನಿಗಳು ಮೋದಿ ಹಾಗೂ ಅವರ ತಾಯಿ ಹೀರಾಬೆನ್‌ ಮೋದಿ ಇರುವ ಚಿತ್ರ ಬಿಡಿಸಿ, ಅವುಗಳನ್ನು ಉಡುಗೊರೆ ನೀಡಿದ್ದಾರೆ. ಇದಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದರು. ಇದೇ ವೇಳೆ, ಮೋದಿ ಅವರು ತಾಯಿ ಜತೆ ಇರುವ ಚಿತ್ರವನ್ನು ಬಿಡಿಸಿ, ಅದಕ್ಕೆ ಫ್ರೇಮ್‌ ಹಾಕಿಸಿ, ಸಮಾವೇಶದಲ್ಲಿ ಇಬ್ಬರು ಯುವಕರು ಅವುಗಳನ್ನು ಹಿಡಿದುಕೊಂಡು ನಿಂತಿದ್ದರು. ಮೋದಿ ಅವರು ಉಡುಗೊರೆ ನೋಡಿ ಖುಷಿ ಪಟ್ಟರು. “ನನ್ನ ತಾಯಿಯ ಫೋಟೊ ಉಡುಗೊರೆ ನೀಡಿರುವುದು ಖುಷಿ ತಂದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಒಂದೇ ದಿನ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ನಾವು ತಾಯಿ, ದುರ್ಗಾ ಮಾತೆ, ಕಾಳಿ ಮಾತೆ ಹಾಗೂ ಭಾರತ ಮಾತೆಯನ್ನು ವರ್ಷವಿಡೀ ಆರಾಧಿಸುತ್ತೇವೆ” ಎಂದರು.

5 ಗ್ಯಾರಂಟಿ ಘೋಷಿಸಿದ ಮೋದಿ

ಪಶ್ಚಿಮ ಬಂಗಾಳದ ಬರಾಕ್‌ಪುರದಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು 5 ಗ್ಯಾರಂಟಿ ಘೋಷಣೆ ಮಾಡಿದರು., “ನಾನು ಪಶ್ಚಿಮ ಬಂಗಾಳದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡುತ್ತಿದ್ದೇನೆ. ನಾನು ಇರುವವರೆಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡಲು ಬಿಡಲ್ಲ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಲು ಬಿಡುವುದಿಲ್ಲ. ನೀವು ರಾಮನವಮಿಯನ್ನು ಆಚರಿಸುವುದನ್ನು ತಡೆಯಲು ಯಾರಿಂದಲೂ ಆಗಲ್ಲ. ಪಶ್ಚಿಮ ಬಂಗಾಳದಲ್ಲಿ ಸಿಎಎ ಜಾರಿಯನ್ನು ತಡೆಯಲು ಬಿಡುವುದಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಯಾರಿಂದಲೂ ಬದಲಿಸಲು ಬಿಡಲ್ಲ” ಎಂದು ಮೋದಿ ಅವರು ಐದು ಗ್ಯಾರಂಟಿಗಳನ್ನು ಘೋಷಿಸಿದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಭಾಷಣದ ವೇಳೆ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. “ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್‌ನ ಒಂದು ಕುಟುಂಬದ ಸದಸ್ಯರು ದೇಶವನ್ನು ದಶಕಗಳವರೆಗೆ ಆಳಿದರು. ಆದರೆ, ಅವರು ಪೂರ್ವ ಭಾರತದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರು. ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ ಸೇರಿ ಹಲವು ರಾಜ್ಯಗಳ ಅಭಿವೃದ್ಧಿಯನ್ನು ಕಾಂಗ್ರೆಸ್‌ ಕಡೆಗಣಿಸಿತು. ಆದರೆ, ನೀವು 2014ರಲ್ಲಿ ಮೋದಿಯನ್ನು ಆಯ್ಕೆ ಮಾಡಿದಿರಿ. ಹಾಗಾಗಿ, ಈಗ ಇಡೀ ದೇಶವೇ ಏಳಿಗೆ ಹೊಂದುತ್ತಿದೆ. ಆರ್ಥಿಕತೆಯಲ್ಲಿ ನಾವು ದಾಪುಗಾಲು ಇಡುತ್ತಿದ್ದೇವೆ” ಎಂದರು.

ಇದನ್ನೂ ಓದಿ: Narendra Modi: ಚುನಾವಣೆ ಪ್ರಚಾರದ ವೇಳೆ 5 ಗ್ಯಾರಂಟಿಗಳನ್ನು ಘೋಷಿಸಿದ ಮೋದಿ; ಏನವು?

Exit mobile version