Site icon Vistara News

Ram Mandir: ಶ್ರೀರಾಮನ ಜೀವನ ಸಾರುವ ಸ್ಟ್ಯಾಂಪ್‌ ಬಿಡುಗಡೆ ಮಾಡಿದ ಮೋದಿ; ಏನಿದರ ವೈಶಿಷ್ಟ್ಯ?

Narendra Modi

PM Narendra Modi releases Commemorative Postage Stamps on Ram Mandir And Lord Shri Ram

ನವದೆಹಲಿ: ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಡೀ ನಗರವೀಗ ಧಾರ್ಮಿಕ ನಗರವಾಗಿ ಮಾರ್ಪಟ್ಟಿದ್ದು, ಎಲ್ಲೆಡೆ ರಾಮನ ಜಪ ಜೋರಾಗಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನೆ ಮಾಡಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ, ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ವಿಶೇಷ ಅಂಚೆ ಚೀಟಿಗಳನ್ನು (Commemorative Postage Stamps) ಬಿಡುಗಡೆ ಮಾಡಿದ್ದಾರೆ.

ರಾಮಮಂದಿರ ಉದ್ಘಾಟನೆಯ ಸ್ಮರಣಾರ್ಥ ಮೋದಿ ಅವರು ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾಮಮಂದಿರ, ಭಗವಾನ್‌ ಗಣೇಶ, ಭಗವಾನ್‌ ಹನುಮಾನ್‌, ಜಟಾಯು, ಕೇವಟ್‌ರಾಜ್ ಹಾಗೂ ಶಬರಿ ಮಾತೆಯ ಆರು ಅಂಚೆ ಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದರು. ಚಿನ್ನದ ಎಲೆಗಳ ಮೇಲೆ ಸೂರ್ಯನ ಕಿರಣ ಸ್ಪರ್ಶಿಸುವುದು, ಭಗವಾನ್‌ ಶ್ರೀರಾಮನ ಜೀವನ ವೃತ್ತಾಂತ ಸಾರುವ ಅಂಚೆ ಚೀಟಿಗಳನ್ನು ಮೋದಿ ಬಿಡುಗಡೆ ಮಾಡಿದ್ದಾರೆ. ರಾಮಮಂದಿರದ ಜತೆಗೆ ಚೌಪೈ ಮಂಗಲ ಭಗವಾನ್‌ ಅಮಂಗಲ ಹರಿಯ ವಿನ್ಯಾಸವೂ ಅಂಚೆ ಚೀಟಿಯಲ್ಲಿದೆ.

ಸೂರ್ಯದೇವ, ಸರಯೂ ನದಿ ಹಾಗೂ ದೇವಾಲಯದ ಸುತ್ತಮುತ್ತ ಇರುವ ವಾಸ್ತುಶಿಲ್ಪದ ಹಿರಿಯನ್ನೂ ಅಂಚೆ ಚೀಟಿಗಳು ಸಾರುತ್ತಿವೆ. ಸುಮಾರು 48 ಪುಟಗಳ ಪುಸ್ತಕದಲ್ಲಿ ಶ್ರೀರಾಮನು ಜಾಗತಿಕವಾಗಿ ಹೇಗೆ ಪ್ರಭಾವ ಬೀರಿದ್ದಾನೆ ಎಂಬುದನ್ನೂ ಅಂಚೆ ಚೀಟಿಗಳ ಮೂಲಕವೇ ತಿಳಿಸಲಾಗಿದೆ. ಭಾರತ ಮಾತ್ರವಲ್ಲ, ಅಮೆರಿಕ, ಬ್ರಿಟನ್‌, ನ್ಯೂಜಿಲ್ಯಾಂಡ್‌, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಸೇರಿ ಹಲವು ರಾಷ್ಟ್ರಗಳು ಬಿಡುಗಡೆ ಮಾಡಿದ ಅಂಚೆ ಚೀಟಿಗಳು ಕೂಡ ಈ ಪುಸ್ತಕದಲ್ಲಿವೆ.

ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಮೋದಿ, “ರಾಮಮಂದಿರದ ಸ್ಮರಣಾರ್ಥ ಇಂದು ಆರು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವ ಭಾಗ್ಯ ನನ್ನದಾಯಿತು. ರಾಮನ ಎಲ್ಲ ಭಕ್ತರಿಗೂ ಅಭಿನಂದನೆಗಳು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಧಾರ್ಮಿಕ ವಿಧಿವಿಧಾನಗಳಿಗೆ ಅನಿಲ್‌ ಮಿಶ್ರಾ ಪ್ರಧಾನ ಯಜಮಾನ; ಯಾರಿವರು?

55 ದೇಶಗಳ ಗಣ್ಯರಿಗೆ ಆಹ್ವಾನ

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version