Site icon Vistara News

Heat Wave: ರಣಬಿಸಿಲು, ಉಷ್ಣಗಾಳಿ ಹೊಡೆತ; ತುರ್ತು ಸಭೆ ನಡೆಸಿದ ಮೋದಿ ಸೂಚಿಸಿದ್ದೇನು?

Heat Wave

PM Narendra Modi reviews readiness to tackle heat wave as India braces for sweltering months

ನವದೆಹಲಿ: ಕರ್ನಾಟಕ ಸೇರಿ ದೇಶಾದ್ಯಂತ ಬೇಸಿಗೆಯ (Summer) ರಣಬಿಸಿಲು ದಿನೇದಿನೆ ಜಾಸ್ತಿಯಾಗುತ್ತಿದ್ದು, ಉಷ್ಣ ಗಾಳಿಯ ಭೀತಿಯೂ ದುಪ್ಪಟ್ಟಾಗಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ (ಏಪ್ರಿಲ್‌ 11) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಉಷ್ಣ ಗಾಳಿಯ (Heat Wave) ಭೀತಿ, ತಾಪಮಾನದ ಹೆಚ್ಚಳದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ (Narendra Modi) ಅವರು ಅಧಿಕಾರಿಗಳು ಹಾಗೂ ಸಚಿವರ ಸಭೆ ನಡೆಸಿದ್ದು, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಿದ್ದಾರೆ ಎಂದು ಪ್ರಧಾಮಮಂತ್ರಿ ಕಚೇರಿ (PMO) ತಿಳಿಸಿದೆ.

ದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಯ ಪ್ರಮಾಣವು ಗಣನೀಯವಾಗಿ ಕಡಿಮೆಯಾದ ಕಾರಣ ಏಪ್ರಿಲ್‌ ಆರಂಭದಲ್ಲಿಯೇ ದೇಶಾದ್ಯಂತ ರಣ ಬಿಸಿಲು ಇದೆ. ಇದರಿಂದಾಗಿ ಈಗಾಗಲೇ ಬಹುತೇಕ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಷ್ಟೇ ಅಲ್ಲ, ಏಪ್ರಿಲ್‌ನಿಂದ ಜೂನ್‌ವರೆಗೆ ಉಷ್ಣ ಮಾರುತವು ನಿಗದಿತ ಪ್ರಮಾಣಕ್ಕಿಂತ ಎರಡು ಪಟ್ಟು ಜಾಸ್ತಿ ಇರಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಸಿದೆ. ಇದರಿಂದಾಗಿ ನರೇಂದ್ರ ಮೋದಿ ಅವರು ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ಪಿಎಂಒ ತಿಳಿಸಿದೆ.

ಮೋದಿ ಚರ್ಚಿಸಿದ ವಿಷಯಗಳು ಯಾವವು?

ನರೇಂದ್ರ ಮೋದಿ ಅವರು ಸಕಲ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅದರಲ್ಲೂ, ಆರೋಗ್ಯ ಕ್ಷೇತ್ರಕ್ಕೆ ಮೋದಿ ಹೆಚ್ಚು ಗಮನ ಹರಿಸಿದರು. ಅಗತ್ಯ ಔಷಧಿಗಳ ಲಭ್ಯತೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಸೇರಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂಬುದಾಗಿ ನರೇಂದ್ರ ಮೋದಿ ಅವರು ಸೂಚಿಸಿದರು.

ನೀರಿನ ಪೂರೈಕೆ, ಔಷಧಗಳ ಲಭ್ಯತೆ ಸೇರಿ ಎಲ್ಲ ಸೌಕರ್ಯಗಳನ್ನು ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಆಯಾ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳೊಂದಿಗೆ ನಿರಂತವಾಗಿ ಸಂಪರ್ಕ ಸಾಧಿಸಬೇಕು. ಆಸ್ಪತ್ರೆಗಳ ಲಭ್ಯತೆ, ಅರಣ್ಯಗಳಲ್ಲಿ ಅಗ್ನಿ ದುರಂತ ಸಂಭವಿಸಿದರೆ ಕ್ಷಿಪ್ರವಾಗಿ ಕ್ರಮ ತೆಗೆದುಕೊಳ್ಳಲು ಸಿದ್ಧತೆ ಸೇರಿ ಹಲವು ಸೂಚನೆ ನೀಡಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಹವಾಮಾನ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: Benefits of Summer Fruits: ಬೇಸಿಗೆಯಲ್ಲಿ ಈ ಹಣ್ಣುಗಳನ್ನು ನಾವು ತಿನ್ನಲೇಬೇಕು!

Exit mobile version