ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೆಲವೇ ಕ್ಷಣಗಳಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಸಂಜೆ 7 ಗಂಟೆಗೆ ರಾಮಮಂದಿರದಲ್ಲಿ (Ram Mandir) ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ 7.30ರ ಸುಮಾರಿಗೆ 2 ಕಿಲೋ ಮೀಟರ್ ರೋಡ್‌ಶೋ ನಡೆಸಲಿದ್ದಾರೆ. ಈ ರೋಡ್ ಶೋ ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಸಾಗಲಿದೆ. ಈ ಬೃಹತ್ ರೋಡ್‌ಶೋದಲ್ಲಿ (Modi Road Show) ಸಿಂಧಿ, ಪಂಜಾಬಿಗಳು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗಿಯಾಗಲಿದ್ದಾರೆ. ಇಡೀ ರೋಡ್ ಶೋ ಕಾರ್ಯಕ್ರಮವನ್ನು ನೀವು ಇಲ್ಲಿ ಲೈವ್ ವೀಕ್ಷಣೆ ಮಾಡಬಹುದಾಗಿದೆ.
ನರೇಂದ್ರ ಮೋದಿ ಅವರು ಸಾಗುವ ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ರಾಮಮಂದಿರದ 11ನೇ ಗೇಟ್‌ನ ಎದುರು ಹೂವುಗಳು ಮತ್ತು ಧ್ವಜಗಳಿಂದ ಸಿಂಗರಿಸಲಾಗಿದೆ. ಪೊಲೀಸರ ಜೊತೆಗೆ ಭಯೋತ್ಪಾದಕಾ ನಿಗ್ರಹ ದಳ(ATS) ಕಮಾಂಡೋಗಳು ಭದ್ರತಾ ವ್ಯವಸ್ಥೆಯನ್ನು ಪರಿಶೋಲಿಸುತ್ತಿದ್ದಾರೆ. ಅಲ್ಲದೇ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸಕಲ ಸಿದ್ದತೆ ನಡೆಸಲಾಗಿದೆ. ರಾಮಲಲ್ಲಾ ದರ್ಶನ ಮಾರ್ಗದ ಗೇಟ್ ನಂಬರ್ 11ರಲ್ಲಿ ಹೂಗಳಿಂದ ಸಿಂಗರಿಸಲಾಗಿದೆ. ರಸ್ತೆಯುದ್ಧಕ್ಕೂ ಪ್ರಧಾನಿ ಮೋದಿಯ ಕಟೌಟ್ ನಿರ್ಮಿಸಲಾಗಿದೆ. ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅಯೊಧ್ಯೆಗೆ ಭೇಟಿ ಕೊಡುತ್ತಿದ್ದಾರೆ. ಅವರ ರೋಡ್‌ಶೋದಲ್ಲಿ ಅನೇಕ ಸಾಧು ಸಂತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ನರೇಂದ್ರ ಮೋದಿ ಅವರ ರೋಡ್ ಶೋ ಪ್ರಾಮುಖ್ಯತೆ ಪಡೆದಿದೆ. ಉತ್ತರ ಪ್ರದೇಶ ಸೇರಿ ದೇಶಾದ್ಯಂತ ರಾಮಮಂದಿರ ನಿರ್ಮಾಣವು ಬಿಜೆಪಿಗೆ ಪ್ರಮುಖ ಚುನಾವಣಾ ವಿಷಯವೂ ಆಗಿದೆ.
ಇದನ್ನೂ ಓದಿ: Lok Sabha Election : ರಾಹುಲ್ ಪ್ರಧಾನಿಯಾಗುವುದು ಪಾಕಿಸ್ತಾನದ ಆಸೆ ಎಂದ ಮೋದಿ, ತಿರುಗೇಟು ಕೊಟ್ಟ ಪ್ರಿಯಾಂಕಾ