ನವದೆಹಲಿ: “ಮುಂದಿನ 5 ವರ್ಷಗಳಲ್ಲಿ ಭಾರತವು (India) ಅದ್ಭುತವಾಗಿ ಏಳಿಗೆ ಹೊಂದಲಿದೆ. ಇದು ನಿಮಗೆ ನಾನು ನೀಡುತ್ತಿರುವ ಗ್ಯಾರಂಟಿಯಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಸಿಎನ್‌ಎನ್-ನ್ಯೂಸ್ 18 ಆಯೋಜಿಸಿದ್ದ ಎರಡು ದಿನಗಳ ರೈಸಿಂಗ್ ಭಾರತ್ ಸಮಿಟ್ 2024 (Rising Bharat Summit 2024) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಏಳಿಗೆ, ವಿಕಸಿತ ಭಾರತದ ಕಲ್ಪನೆ, ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.
“ಭಾರತವು ಏಳಿಗೆ ಹೊಂದಲು, ಜಗತ್ತಿನಲ್ಲೇ ವಿಕಸಿತ ಎಂದು ಹೇಳಿಕೊಳ್ಳುವ ದಿನಗಳು ದೂರವಿಲ್ಲ. ದೇಶದ ವಿದೇಶಿ ವಿನಿಮಯದ ಮೀಸಲು ಹಣ 700 ಶತಕೋಟಿ ಡಾಲರ್ ಇದೆ. ಯುವಕರಿಗೆ ವಿಫುಲ ಅವಕಾಶಗಳನ್ನು ನೀಡಲಾಗಿದೆ. ಹೂಡಿಕೆಗೆ, ಉದ್ಯಮಗಳಿಗೆ ಭಾರತದ ಹೇಳಿಮಾಡಿಸಿದ ದೇಶವಾಗಿದೆ. ಹಾಗಾಗಿ, ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮುವತ್ತ ಭಾರತ ದಾಪುಗಾಲು ಇಡುತ್ತಿದೆ. ಅದರಲ್ಲೂ, ಮುಂದಿನ 5 ವರ್ಷಗಳಲ್ಲಿ ದೇಶವು ಹತ್ತಾರು ರೀತಿಯಲ್ಲಿ ರೂಪಾಂತರ ಹೊಂದಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
Addressing the @CNNnews18 #RisingBharatSummit.https://t.co/docqvHawz1
— Narendra Modi (@narendramodi) March 20, 2024
“ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಜನರಿಗೆ ಹತ್ತಾರು ಗ್ಯಾರಂಟಿಗಳನ್ನು ನೀಡಿದೆ. ನಾನು ದೇಶದ ಕೋಟ್ಯಂತರ ಜನರಿಗೆ ಬ್ಯಾಂಕ್ ಖಾತೆಗಳನ್ನು ಗ್ಯಾರಂಟಿಯಾಗಿ ನೀಡಿದೆ. ಹಾಗಾಗಿಯೇ, ಮುದ್ರಾ ಯೋಜನೆ ಜಾರಿಗೆ ತರಲು ಸಾಧ್ಯವಾಯಿತು. ಇದರಿಂದ ಯುವಕರಿಗೆ 30 ಲಕ್ಷ ಕೋಟಿ ರೂ. ಸಾಲ ನೀಡಲು ಸಾಧ್ಯವಾಯಿತು. 10 ವರ್ಷದಲ್ಲಿ ದೇಶವು ಗಣನೀಯವಾಗಿ ಬದಲಾಗಿದೆ. ಆದಾಯ ತೆರಿಗೆ ಮಿತಿಯನ್ನು 7 ಲಕ್ಷ ರೂ.ಗೆ ಏರಿಸಿದ್ದೇವೆ. ಆ ಮೂಲಕ ತೆರಿಗೆ ವಿನಾಯಿತಿ ನೀಡಿದ್ದೇವೆ. 10 ವರ್ಷದಲ್ಲಿ ಪ್ರತಿ ದಿನ 2 ಕಾಲೇಜು ನಿರ್ಮಿಸಿದ್ದೇವೆ, ವಾರಕ್ಕೆ ಒಂದರಂತೆ ವಿಶ್ವವಿದ್ಯಾಲಯ ನಿರ್ಮಿಸಿದ್ದೇವೆ. ಬಡವರು ಹಾಗೂ ಮಧ್ಯಮ ವರ್ಗದವರ ಏಳಿಗೆಗೆ ಹತ್ತಾರು ಯೋಜನೆಗಳನ್ನು ರೂಪಿಸಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: Shehla Rashid: ಮೋದಿಯ ಉಗ್ರ ವಿರೋಧಿಯಾಗಿದ್ದ ನಾನೀಗ ಕಟ್ಟಾ ಅಭಿಮಾನಿ ಎಂದ ಜೆಎನ್‌ಯು ಹೋರಾಟಗಾರ್ತಿ!
21ನೇ ಶತಮಾನ ನಮ್ಮದು
“ದೇಶವೇ ಮೊದಲು ಎಂಬುದಾಗಿ ನಾವೆಲ್ಲರೂ ಕಾರ್ಯನಿರ್ವಹಿಸೋಣ. ಕೇಂದ್ರ ಸರ್ಕಾರವೂ ದೇಶದ ಜನರೊಂದಿಗೆ ಇದೆ. ಇದಕ್ಕೂ ಮೊದಲಿನ ಸರ್ಕಾರಗಳು ಬಡವರು ಹಾಗೂ ಮಧ್ಯಮ ವರ್ಗದವರನ್ನು ಮರೆತುಬಿಟ್ಟಿದ್ದವು. ಆದರೆ, ಯಾರು ಯಾರನ್ನು ಮರೆತಿದ್ದರೋ, ಆ ಬಡವರ ಏಳಿಗೆಗೆ ನಾನು ಶ್ರಮಿಸುತ್ತಿದ್ದೇನೆ. ಸರ್ಕಾರದ ಯೋಜನೆಗಳ ಬಿಟ್ಟಿ ಲಾಭ ಪಡೆಯತ್ತಿದ್ದ 10 ಕೋಟಿ ನಕಲಿ ಫಲಾನುಭವಿಗಳನ್ನು ತೆಗೆದುಹಾಕಿ, ಬಡವರಿಗೆ ಸವಲತ್ತುಗಳು ಸಿಗುವಂತೆ ಮಾಡಿದ್ದೇವೆ. ಸಕಲ ಕ್ಷೇತ್ರಗಳಲ್ಲಿ ದೇಶವು ಏಳಿಗೆ ಹೊಂದುತ್ತಿದ್ದು, 21ನೇ ಶತಮಾನವು ಭಾರತದ್ದೇ ಎಂದು ಜಗತ್ತು ಹೇಳುತ್ತಿದೆ” ಎಂಬುದಾಗಿ ಮೋದಿ ಹೇಳಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ