Site icon Vistara News

ಮೋದಿ ಭದ್ರತಾ ವೈಫಲ್ಯ; ಪಂಜಾಬ್‌ ಮಾಜಿ ಕಾರ್ಯದರ್ಶಿಗೆ ಸಿಎಂ ಮಾನ್ ಕ್ಲೀನ್‌ ಚಿಟ್‌ ‌

Modi Security Breach

PM Narendra Modi security breach: Mann gives clean chit to state’s former chief secy

ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 2022ರ ಜನವರಿ 5ರಂದು ಪಂಜಾಬ್‌ಗೆ ಭೇಟಿ ನೀಡಿದ್ದಾಗ ಉಂಟಾಗಿದ್ದ ಭದ್ರತಾ ವೈಫಲ್ಯ ಪ್ರಕರಣಕ್ಕೆ (Modi Security Breach) ಸಂಬಂಧಿಸಿದಂತೆ ಪಂಜಾಬ್‌ ಮಾಜಿ ಮುಖ್ಯ ಕಾರ್ಯದರ್ಶಿ, ಐಎಎಸ್‌ ಹಿರಿಯ ಅಧಿಕಾರಿ ಅನಿರುದ್ಧ್‌ ತಿವಾರಿ ಅವರಿಗೆ ಮುಖ್ಯಮಂತ್ರಿ ಭಗವಂತ್‌ ಮಾನ್‌ (Bhagwant Mann) ಅವರು ಕ್ಲೀನ್‌ಚಿಟ್‌ ನೀಡಿದ್ದಾರೆ. ಭದ್ರತಾ ವೈಪಲ್ಯ ಪ್ರಕರಣದಲ್ಲಿ ಅನಿರುದ್ಧ್‌ ತಿವಾರಿ ಅವರ ತಪ್ಪೇನೂ ಇಲ್ಲ ಎಂಬುದಾಗಿ ರಾಜ್ಯ ಸರ್ಕಾರ ಕ್ಲೀನ್‌ ಚಿಟ್‌ ನೀಡಿದೆ.

ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೇಮಿಸಿದ ತನಿಖೆಯ ಶಿಫಾರಸಿನ ಅನ್ವಯ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ಮಾಹಿತಿ ಒದಗಿಸಿ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಭಲ್ಲಾ ಅವರು ಈಗಾಗಲೇ ಪಂಜಾಬ್‌ ಸರ್ಕಾರಕ್ಕೆ ಮೂರು ಬಾರಿ ಮನವಿ ಮಾಡಿದ್ದಾರೆ. ಆದರೆ, ಇದುವರೆಗೆ ರಾಜ್ಯ ಸರ್ಕಾರವು ರಾಜ್ಯ ಕೇಡರ್‌ ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮ ತೆಗೆದುಕೊಂಡಿದೆ. ಈಗ ಪ್ರಕರಣದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಅನಿರುದ್ಧ್‌ ತಿವಾರಿ ಅವರನ್ನು ನಿರ್ದೋಷಿ ಎಂದು ಘೋಷಿಸಿದೆ.

Bhagwant Mann

ಪೊಲೀಸ್‌ ಅಧಿಕಾರಿಗಳ ಅಮಾನತು

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಂಜಾಬ್‌ ಸರ್ಕಾರವು ಭಟಿಂಡಾ ಎಸ್‌ಪಿ ಆಗಿರುವ, ಆಗ ಫಿರೋಜ್‌ಪುರ ಎಸ್‌ಪಿ ಆಗಿದ್ದ ಗುರುಬಿಂದರ್‌ ಸಿಂಗ್‌ ಅವರನ್ನು ಅಮಾನತುಗೊಳಿಸಿದೆ. ಇದಾದ ಬಳಿಕ ಡಿಎಸ್‌ಪಿ ರ‍್ಯಾಂಕ್‌ ಅಧಿಕಾರಿಗಳಾದ ಪರ್ಸೋನ್‌ ಸಿಂಗ್‌, ಜಗದೀಶ್‌ ಕುಮಾರ್‌, ಇನ್ಸ್‌ಪೆಕ್ಟರ್‌ಗಳಾದ ಜತಿಂದರ್‌ ಸಿಂಗ್‌, ಬಲವಿಂದರ್‌ ಸಿಂಗ್‌, ಜಸ್ವಂತ್‌ ಸಿಂಗ್‌, ಅಸಿಸ್ಟಂಟ್‌ ಸಬ್‌ ಇನ್ಸ್‌ಪೆಕ್ಟರ್‌ ರಮೇಶ್‌ ಕುಮಾರ್‌ ಅವರನ್ನು ಪಂಜಾಬ್‌ ಸರ್ಕಾರ ಅಮಾನತುಗೊಳಿಸಿದೆ. ನರೇಂದ್ರ ಮೋದಿ ಭೇಟಿ ವೇಳೆ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ವರದಿಯಲ್ಲಿ ಉಲ್ಲೇಖಿಸಿದ ಕಾರಣ ಅಮಾನತುಗೊಳಿಸಲಾಗಿದೆ.

ಅಂದು ಏನಾಗಿತ್ತು?

ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಭಟಿಂಡಾದಿಂದ ಫಿರೋಜಪುರ್‌ಗೆ ಚುನಾವಣಾ ರಾಲಿಯಲ್ಲಿ ಪಾಲ್ಗೊಳ್ಳಲು ಮತ್ತು ನವದೆಹಲಿ -ಅಮೃತಸರ-ಕಾತ್ರಾ ಎಕ್ಸ್‌ಪ್ರೆಸ್ ವೇ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು 2022ರ ಜನವರಿ 5ರಂದು ಹೊರಟಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜಪುರ್‌ಗೆ ರಸ್ತೆ ಮಾರ್ಗದ ಮೂಲಕ ಹೊರಟ್ಟಿದ್ದರು. ಈ ಸಂದರ್ಭದಲ್ಲಿ ಕೆಲವು ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭದ್ರತಾ ಸಿಬ್ಬಂದಿ ಇದ್ದ ವಾಹನಗಳನ್ನು ದಾರಿ ಮಧ್ಯೆ ತಡೆದಿದ್ದರು. ಇದರಿಂದಾಗಿ ಪ್ರಧಾನಿ ದಾರಿ ಮಧ್ಯೆಯೇ ಸುಮಾರು 20 ನಿಮಿಷ ಉಳಿಯಬೇಕಾಯಿತು.

ಇದನ್ನೂ ಓದಿ: Modi Security Lapse: ಮೋದಿ ಭದ್ರತಾ ವೈಫಲ್ಯ, ಪಂಜಾಬ್‌ ಎಸ್‌ಪಿ ಸಸ್ಪೆಂಡ್;‌ ತಪ್ಪಾಗಿದ್ದೆಲ್ಲಿ?

ಪ್ರತಿಕೂಲ ಹವಾಮಾನ ಪರಿಣಾಮದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಫಿರೋಜ್‌ಪುರಗೆ ತೆರಳಲು ಸಾಧ್ಯವಾಗಿರಲಿಲ್ಲ. ಪ್ರಧಾನಿಯ ಪಂಜಾಬ್ ಪ್ರವಾಸದ ವೇಳೆ ಭಾರಿ ಭದ್ರತಾ ವೈಫಲ್ಯ ಸಂಭವಿಸಿತು. ಇದರಿಂದಾಗಿ ಪ್ರಧಾನಿ ಬೆಂಗಾವಲು ಪಡೆಯು ಫಿರೋಜ್‌ಪುರ ಪ್ರವಾಸವನ್ನು ರದ್ದು ಮಾಡಿ, ವಾಪಸ್ ಬರುವ ಬಗ್ಗೆ ನಿರ್ಧರಿಸಿತ್ತು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು. ಇದಾದ ಬಳಿಕ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು. ರಾಜಕೀಯ ಮೇಲಾಟಕ್ಕೂ ಇದು ಕಾರಣವಾಗಿತ್ತು. ಆಗಿನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಮೋದಿ ಅವರು ಕೊನೆಯ ಕ್ಷಣದಲ್ಲಿ ಪ್ರಯಾಣದ ಸ್ಥಳ ಬದಲಿಸಿದ ಕಾರಣ ಅಚಾತುರ್ಯ ಆಗಿದೆ ಎಂದು ಆಗಿನ ಕಾಂಗ್ರೆಸ್‌ ಸರ್ಕಾರ ಸ್ಪಷ್ಟನೆ ನೀಡಿತ್ತು.

ಈ ಸಂಗತಿ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್‌ ಮೂಲಕ ತಿಳಿಸಿ

Exit mobile version