ನವ ದೆಹಲಿ: ಭಾರತದ ಶ್ರೇಷ್ಠ ಕ್ರೀಡಾಪಟುವೆಂದು ಗುರುತಿಸಿಕೊಂಡಿರುವ ಮಾಜಿ ಅಥ್ಲೀಟ್ ಪಿ.ಟಿ.ಉಷಾ ರಾಜ್ಯಸಭೆ ಸದಸ್ಯೆಯಾಗಿ ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜ್ಯ ಸಭೆ ಸಂಸದೆಯಾದ ಪಿ. ಟಿ.ಉಷಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ತಾವು ಪಿ.ಟಿ.ಉಷಾ ಪಕ್ಕದಲ್ಲಿ ನಿಂತುಕೊಂಡಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ನರೇಂದ್ರ ಮೋದಿ, ʼಸಂಸತ್ತಿನಲ್ಲಿ ಪಿ.ಟಿ.ಉಷಾರನ್ನು ಭೇಟಿಯಾಗಿ ತುಂಬ ಖುಷಿ ಆಗಿದೆʼ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಪ್ರಧಾನಿ ಮೋದಿ ಮತ್ತು ಪಿ.ಟಿ.ಉಷಾ ಪರಸ್ಪರ ಮುಖ ನೋಡಿಕೊಂಡು ಚೆಂದವಾಗಿ ನಗುತ್ತಿರುವುದನ್ನು ನೋಡಬಹುದು. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಿ.ಟಿ. ಉಷಾ ಅವರೊಂದಿಗೆ ತಾವು ನಿಂತಿರುವ ಫೋಟೋ ಶೇರ್ ಮಾಡಿಕೊಂಡು, ಅವರಿಗೆ ಅಭಿನಂದನೆ ಸಲ್ಲಿಸಿದ್ದರು.
ಬಿಜೆಪಿ ಈ ಸಲ ದಕ್ಷಿಣ ಭಾರತದಿಂದ ನಾಲ್ವರು ಗಣ್ಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಖ್ಯಾತ ಅಥ್ಲೀಟ್ ಆಗಿದ್ದ ಪಿ.ಟಿ.ಉಷಾ, ಕರ್ನಾಟಕದ ಧರ್ಮಸ್ಥಳ ದೇಗುಲದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ನಿರ್ದೇಶಕ ಇಳಯರಾಜ, ಚಿತ್ರಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್‌ರ ಹೆಸರನ್ನು ಜುಲೈ 6ರಂದು ಘೋಷಣೆ ಮಾಡಿತ್ತು. ಅದಾದ ಬಳಿಕ ಪ್ರಧಾನಿ ಮೋದಿ ಟ್ವೀಟ್ ನಾಲ್ವರಿಗೂ ಅಭಿನಂದನೆ ಸಲ್ಲಿಸಿದ್ದರು. ಇದೀಗ ರಾಜ್ಯಸಭೆಯಲ್ಲಿ ಅಧಿವೇಶನ ಪ್ರಾರಂಭವಾದ ಹಿನ್ನೆಲೆಯಲ್ಲಿ ಇವರೆಲ್ಲ ಪ್ರಮಾಣ ವಚನ ಸ್ವೀಕಾರ ಮಾಡುವರು. ಹಾಗೇ, ಇಂದು ಪಿ.ಟಿ.ಉಷಾ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಡಿಯೋ ಶೇರ್ ಮಾಡಿಕೊಂಡ ಪಿ.ಟಿ.ಉಷಾ
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಜನಿಸಿದ ಉಷಾ ಭಾರತದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು. ವೇಗದ ಓಟಗಾರ್ತಿಯಾಗಿ ಲಕ್ಷಾಂತರ ಜನರಿಗೆ ಮಾದರಿ ಮತ್ತು ಸ್ಫೂರ್ತಿ. “ಪಯ್ಯೋಳಿ ಎಕ್ಸ್‌ಪ್ರೆಸ್ʼ ಎಂದು ಜನಪ್ರಿಯರಾದವರು. ದೇಶ ಮತ್ತು ವಿವಿಧ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. ನಿವೃತ್ತಿಯ ನಂತರ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಪ್ರಾರಂಭಿಸಿದ್ದಾರೆ. ಅವರಿಂದು ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡು, ʼಆ ದೇವರಿಗೆ ಕೃತಜ್ಞನಾಗಿರುತ್ತೇನೆʼ ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಗೆ ನಾಮನಿರ್ದೇಶನ; ಡಾ. ವೀರೇಂದ್ರ ಹೆಗ್ಗಡೆಯವರ ಸಾರ್ಥಕ ಸೇವೆಗೆ ಸಂದ ಗೌರವ