ರಾಂಚಿ: ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಬಿಸಿಲಿನ ಝಳಕ್ಕಿಂತ ಜಾಸ್ತಿಯಾಗುತ್ತಿದೆ. ಬಿರು ಬೇಸಿಗೆ ಆರಂಭವಾಗುತ್ತಿರುವ ಹೊತ್ತಿನಲ್ಲೇ ಚುನಾವಣಾ ಕಾವು ಕೂಡ ಜೋರಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ಕೂಡ ಹೆಚ್ಚಾಗುತ್ತಿವೆ. ಪರಸ್ಪರ ಆರೋಪ, ಪ್ರತ್ಯಾರೋಪ, ಟೀಕೆ, ವ್ಯಂಗ್ಯ, ಕುಚೋದ್ಯಗಳು ಆರಂಭವಾಗಿವೆ. ಇದರ ಬೆನ್ನಲ್ಲೇ, “ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಲೆಗೆ ಗುಂಡು ಹಾರಿಸಬೇಕು” ಎಂದು ಆರ್‌ಜೆಡಿ ನಾಯಕ ಅವಧೇಶ್ ಸಿಂಗ್ ಯಾದವ್ (Awadhesh Singh Yadav) ನೀಡಿದ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಹೌದು, ಜಾರ್ಖಂಡ್‌ನಲ್ಲಿ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಅವಧೇಶ್ ಸಿಂಗ್ ಯಾದವ್ ಮಾತನಾಡಿರುವ ವಿಡಿಯೊವನ್ನು ಜಾರ್ಖಂಡ್ ಬಿಜೆಪಿ ಘಟಕವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. “ನರೇಂದ್ರ ಮೋದಿ ಅವರ ತಲೆಗೆ ಗುಂಡು ಹಾರಿಸಿದರೆ ತಪ್ಪೇನು” ಎಂಬುದಾಗಿ ಅವಧೇಶ್ ಸಿಂಗ್ ಯಾದವ್ ಹೇಳಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಅವಧೇಶ್ ಸಿಂಗ್ ಯಾದವ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
BJP Jharkhand shares video from four days ago, at the INDI alliance meeting held in Koderma, Jharkhand claiming RJD leader Awadhesh Singh Yadav suggesting that PM @narendramodi should be sh0t in the skull !pic.twitter.com/JgUPP1Cl4v
— Megh Updates 🚨™ (@MeghUpdates) March 19, 2024
“ನಾಲ್ಕು ದಿನಗಳ ಹಿಂದೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ಇಂಡಿಯಾ ಒಕ್ಕೂಟದ ಸಭೆ ನಡೆದಿದೆ. ಸಭೆಯಲ್ಲಿ ಆರ್‌ಜೆಡಿ ನಾಯಕ ಅವಧೇಶ್ ಸಿಂಗ್ ಯಾದವ್ ಅವರು ನರೇಂದ್ರ ಮೋದಿ ಅವರ ತಲೆಗೆ ಗುಂಡು ಹಾರಿಸುವ ಕುರಿತು ಮಾತನಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಲು ನಿಶ್ಚಿತ ಎಂಬುದನ್ನು ಅರಿತಿರುವ ಇಂಡಿಯಾ ಒಕ್ಕೂಟದ ಪಕ್ಷಗಳ ನಾಯಕರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ದೇಶದ 140 ಕೋಟಿ ಜನ ನರೇಂದ್ರ ಮೋದಿ ಅವರ ಜತೆಗಿರುವ ಕಾರಣ ಪ್ರತಿಪಕ್ಷಗಳ ಯಾವುದೇ ಪಿತೂರಿಗಳು ಯಶಸ್ಸು ಕಾಣುವುದಿಲ್ಲ” ಎಂಬುದಾಗಿ ಜಾರ್ಖಂಡ್ ಬಿಜೆಪಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Narendra Modi: 5 ವರ್ಷದಲ್ಲಿ ಭಾರತದ ಏಳಿಗೆ ನಿಶ್ಚಿತ; ಇದು ನನ್ನ ಗ್ಯಾರಂಟಿ ಎಂದ ಮೋದಿ
ಬಿಜೆಪಿ ಹಿರಿಯ ನಾಯಕ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರು ಕೂಡ ಅವಧೇಶ್ ಸಿಂಗ್ ಯಾದವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಚುನಾವಣಾ ಆಯೋಗವು ಅವಧೇಶ್ ಸಿಂಗ್ ಯಾದವ್ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆರ್‌ಜೆಡಿ ನಾಯಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಬಾಬುಲಾಲ್ ಮರಾಂಡಿ ಆಗ್ರಹಿಸಿದ್ದಾರೆ. ಐದು ಸೆಕೆಂಡ್‌ಗಳ ವಿಡಿಯೊ ಈಗ ಭಾರಿ ಸಂಚಲನ ಮೂಡಿಸಿದೆ. ಇಂಡಿಯಾ ಒಕ್ಕೂಟದ ನಾಯಕರ ಸಭೆಯಲ್ಲಿ ಅವಧೇಶ್ ಸಿಂಗ್ ಯಾದವ್ ಕುಳಿತಾಗ ಈ ರೀತಿ ಮಾತನಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ