Site icon Vistara News

Narendra Modi: ಯುವಕರು ಕುಡುಕರು ಎಂದ ರಾಹುಲ್‌ ಗಾಂಧಿಗೆ ಮೋದಿ ತಿರುಗೇಟು!

PM Narendra Modi

PM Narendra Modi slams Rahul Gandhi on Drug Addicts Remarks In Varanasi

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ತಮ್ಮ ಲೋಕಸಭೆ ಕ್ಷೇತ್ರದಲ್ಲಿ 13 ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದರು. ಇದಾದ ಬಳಿಕ ಮಾತನಾಡಿದ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರಿಗೆ ಪರೋಕ್ಷವಾಗಿ ಚಾಟಿ ಬೀಸಿದರು. “ವಾರಾಣಸಿ ಯುವಕರು ಮದ್ಯಪಾನ ಮಾಡಿ ಬೀದಿ ಬದಿ ಮಲಗಿದ್ದನ್ನು ನಾನು ನೋಡಿದೆ” ಎಂದು ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಮೋದಿ ಟೀಕಿಸಿದರು.

“ಕಾಂಗ್ರೆಸ್‌ನ ಯುವರಾಜರೊಬ್ಬರು ವಾರಾಣಸಿಯ ಮಕ್ಕಳನ್ನು ನಿಂದಿಸಿದ್ದಾರೆ. ವಾರಾಣಸಿ ಯುವಕರನ್ನು ಕುಡುಕರು ಎಂದು ಕರೆದಿದ್ದಾರೆ. ಇದು ಎಂತಹ ಭಾಷೆ? ಪರಿವಾರವಾದಿಗಳು ನನ್ನನ್ನು ಎರಡು ದಶಕಗಳಿಂದಲೂ ಬೈಯುತ್ತಿದ್ದಾರೆ. ಈಗ ಹತಾಶೆಯಲ್ಲಿ ಉತ್ತರ ಪ್ರದೇಶದ ಯುವಕರನ್ನೂ ಬೈಯುತ್ತಿದ್ದಾರೆ. ಉತ್ತರ ಪ್ರದೇಶದ ಯುವಕರಿಗೆ ಇಂಡಿಯಾ ಒಕ್ಕೂಟ ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದರು.

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಸೇರಿ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು. “ಪರಿವಾರವಾದ, ತುಷ್ಟೀಕರಣದ ನೀತಿಯ ಪರಿಣಾಮವಾಗಿ ಉತ್ತರ ಪ್ರದೇಶದಲ್ಲಿ ಹಲವು ವರ್ಷಗಳವರೆಗೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು. ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಉತ್ತರ ಪ್ರದೇಶವನ್ನು ಹಾಳು ಮಾಡಿದ್ದವು. ಆದರೆ, ಕಳೆದ 10 ವರ್ಷದಲ್ಲಿ ಉತ್ತರ ಪ್ರದೇಶವು ಸಂಪೂರ್ಣವಾಗಿ ಅಭಿವೃದ್ಧಿಯಾಗಿದೆ. ಯುವಕರು ಸೇರಿ ಎಲ್ಲರೂ ಉದ್ಯೋಗ ಪಡೆಯುತ್ತಿದ್ದಾರೆ” ಎಂದು ತಿಳಿಸಿದರು.

“ಇದುವರೆಗೆ ಪರಿವಾರದಿಗಳು ನರೇಂದ್ರ ಮೋದಿಯನ್ನು ತೆಗಳುತ್ತಿದ್ದರು. ಈಗ ಉತ್ತರ ಪ್ರದೇಶದ ನಾಗರಿಕರನ್ನೂ ಪರಿವಾರವಾದಿಗಳು ತೆಗಳುತ್ತಿದ್ದಾರೆ. ಅವರಿಗೆ ಉತ್ತರ ಪ್ರದೇಶದ ಅಭಿವೃದ್ಧಿ ಬೇಕಾಗಿಲ್ಲ. ಕಾಶಿ, ಅಯೋಧ್ಯೆಯ ಮಂದಿರಗಳು ಬೇಕಾಗಿಲ್ಲ. ಹಾಗಾಗಿ, ಅವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಪರಿವಾರವಾದಿಯೊಬ್ಬ ಕಾಶಿ ಹಾಗೂ ಉತ್ತರ ಪ್ರದೇಶದ ಯುವಕರು ನಶೆಯಲ್ಲಿರುತ್ತಾರೆ ಎಂದು ಹತಾಶೆಯಲ್ಲಿ ಹೇಳಿದ್ದಾರೆ. ಇದು ಪ್ರತಿಪಕ್ಷಗಳು, ಪರಿವಾರವಾದಿಗಳ ಮನಸ್ಥಿತಿ” ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಸುಲ್ತಾನ್‌ಪುರ-ವಾರಾಣಸಿ ಚತುಷ್ಪಥ, ರೈಲ್ವೆ ಮೇಲ್ಸೇತುವೆ ನಿರ್ಮಾಣ, ವಾರಾಣಸಿ-ರಾಂಚಿ-ಕೋಲ್ಕೊತಾ ಎಕ್ಸ್‌ಪ್ರೆಸ್‌ ವೇ ಸೇರಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ, ಚಾಲನೆ ನೀಡಿದ ಬಳಿಕ ಮಾತನಾಡಿದರು.

ಇದನ್ನೂ ಓದಿ: Narendra Modi: ಗುಜರಾತ್‌ನವನಾದರೂ ನಾನೀಗ ಬನಾರಸಿ ಎಂದ ಪ್ರಧಾನಿ ಮೋದಿ

ಕಾಶಿಯೊಂದಿಗೆ ತಮಗಿರುವ ಅವಿನಾಭಾವ ಸಂಬಂಧದ ಕುರಿತು ಕೂಡ ಮೋದಿ ಮಾತನಾಡಿದರು. “ಕಳೆದ 10 ವರ್ಷಗಳಲ್ಲಿ ಹಲವು ಬಾರಿ ನಾನು ವಾರಾಣಸಿಗೆ ಆಗಮಿಸಿದ್ದೇನೆ. ವಾರಾಣಸಿಯೊಂದಿಗೆ ನನ್ನ ನಂಟು ಅತ್ಯುತ್ತಮವಾಗಿದೆ. ಹಾಗೆಯೇ, ದೇವಾಲಯ, ಭವನಗಳನ್ನು ನಿರ್ಮಿಸುವ ಜತೆಗೆ ವಾರಾಣಸಿಯಲ್ಲಿ ರಸ್ತೆ, ಸಂಪರ್ಕ ಸೇರಿ ಹಲವು ರೀತಿಯಲ್ಲಿ ಅಭಿವೃದ್ಧಿಗೊಳಿಸಿದ್ದೇನೆ. ಯುವಕರಿಗೆ ಉದ್ಯೋಗಗಳು ಲಭಿಸಿವೆ. ವಿಶ್ವನಾಥ ಧಾಮ ಲೋಕಾರ್ಪಣೆ ಬಳಿಕ ಕಾಶಿಗೆ 12 ಕೋಟಿಗೂ ಅಧಿಕ ಜನ ಭೇಟಿ ನೀಡಿದ್ದಾರೆ. ಇದರಿಂದಾಗಿ ಕಾಶಿಯ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಆಟೋ ಚಾಲಕರು ಸೇರಿ ಎಲ್ಲರಿಗೂ ವ್ಯಾಪಾರ, ಉದ್ಯೋಗ ಸಿಕ್ಕಿದೆ” ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version