ಶಿಮ್ಲಾ: ಪ್ರಧಾನಿ ಮೋದಿ (PM Narendra Modi)ಗೆ ತನ್ನ ತಾಯಿಯೆಂದರೆ ಬಹಳ ಅಚ್ಚುಮೆಚ್ಚು. ಗುಜರಾತ್‌ಗೆ ಹೋದಾಗ ಒಮ್ಮೆಯಾದರೂ ತಮ್ಮ ಹುಟ್ಟೂರಿಗೆ ಹೋಗಿ ತಾಯಿಯನ್ನು ಭೇಟಿಯಾಗಿ, ಅವರೊಟ್ಟಿಗೆ ಕುಳಿತು ಊಟ ಮಾಡಿ, ಸಮಯ ಕಳೆದು ಬರುತ್ತಾರೆ. ಯಾವುದೇ ವಿಶೇಷ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಅಮ್ಮನ ಆಶೀರ್ವಾದ ಪಡೆಯುತ್ತಾರೆ. ಈ ಅಮ್ಮ-ಮಗನ ಪ್ರೀತಿಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ತನಗೆ ತನ್ನಮ್ಮ ಎಷ್ಟು ಮುಖ್ಯ ಎಂಬುದನ್ನು ಇಂದು ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಕ್ಷೀಕರಿಸಿದ್ದಾರೆ. ತಾಯಿ ಹೀರಾಬೆನ್ ಅವರ ಪೇಂಟಿಂಗ್ ಪಡೆಯಲು, ರ‍್ಯಾಲಿ ಮಧ್ಯೆ ಕಾರು ನಿಲ್ಲಿಸಿ, ಕೆಳಗಿಳಿದು ಹೋಗಿದ್ದಾರೆ..ಈ ವಿಡಿಯೋ ಕೂಡ ವೈರಲ್ ಆಗಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಈ ರಾಜ್ಯದಲ್ಲಿ ಇದೇ ವರ್ಷ ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪೂರ್ವಸಿದ್ಧತೆ ಶುರು ಮಾಡಿದೆ. ಅದರ ಭಾಗವಾಗಿ ಪ್ರಧಾನಿ ಮೋದಿ ಇಂದು ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಭೇಟಿ ಕೊಟ್ಟು ಅಲ್ಲಿ ನಡೆದ ಗರೀಬ್ ಕಲ್ಯಾಣ್ ಬೃಹತ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ್ದಾರೆ. ಬಳಿಕ ರಿಡ್ಜ್ ಮೈದಾನದಲ್ಲಿ ರೋಡ್ ಶೋ ಕೂಡ ನಡೆಸಿದರು. ಇದೆಲ್ಲದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿಯವರ ಒಂದು ನಡೆ ಅಚ್ಚರಿ ಮತ್ತು ಮೆಚ್ಚುಗೆಗೆ ಕಾರಣವಾಯಿತು.
ಇದನ್ನೂ ಓದಿ: International Yoga day : ಮೈಸೂರಿಗೆ ಆಗಮಿಸುತ್ತಾರೆ ಪ್ರಧಾನಿ ನರೇಂದ್ರ ಮೋದಿ
ಕಾರಿನಲ್ಲಿ ರೋಡ್ ಶೋ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನು ಸೆಳೆದಿದ್ದು ಒಬ್ಬಳು ಯುವತಿ. ಆಕೆಯ ಕೈಯಲ್ಲಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ಪೇಂಟಿಂಗ್ ಇತ್ತು. ಆಕೆ ಅದನ್ನು ಬಿಡಿಸಿ, ಚೆಂದವಾಗಿ ಲ್ಯಾಮಿನೇಶನ್ ಮಾಡಿಸಿಕೊಂಡು ಬಂದಿದ್ದರು. ಆ ಚಿತ್ರ ಕಾಣುತ್ತಿದ್ದಂತೆ ನರೇಂದ್ರ ಮೋದಿ ತಮ್ಮ ಕಾರು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಲಘುಬಗೆಯಿಂದ ಇಳಿದು ಹೋಗಿ ಯುವತಿಯ ಕೈಯಲ್ಲಿದ್ದ ಪೇಂಟಿಂಗ್ ಪಡೆದಿದ್ದಾರೆ. ಆ ಯುವತಿ ಪ್ರಧಾನಿ ಕಾಲಿಗೆ ನಮಸ್ಕರಿಸಿ, ಆಶೀರ್ವಾದವನ್ನೂ ಪಡೆದರು. ತಮ್ಮ ತಾಯಿಯ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡ ಪ್ರಧಾನಿ ಮೋದಿ, ʼನಿನಗೆ ಈ ಪೇಂಟಿಂಗ್ ಮಾಡಲು ಎಷ್ಟು ದಿನ ಬೇಕಾಯಿತುʼ ಎಂದು ಪ್ರಶ್ನಿಸಿರು. ಅದಕ್ಕೆ ಉತ್ತರ ನೀಡಿದ ಯುವತಿ ʼಒಂದೇ ದಿನ ಸಾಕಾಯಿತುʼ ಎಂದಿದ್ದಾರೆ. ಆ ಹುಡುಗಿಯ ತಲೆ ಮೇಲೆ ವಾತ್ಸಲ್ಯದಿಂದ ಕೈಯಿಟ್ಟ ಮೋದಿಯವರು ಅಷ್ಟೇ ಮುಗ್ಧತೆಯಿಂದ ಪೇಂಟಿಂಗ್ ಹಿಡಿದು ಹೋಗಿದ್ದಾರೆ. ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ