Site icon Vistara News

Narendra Modi:‌ ಕಾಶಿಯಲ್ಲಿ ಕೃತಕ ಬುದ್ಧಿಮತ್ತೆ ಮ್ಯಾಜಿಕ್; ಮಕ್ಕಳಿಗೆ ಮೋದಿ ಮೇಷ್ಟ್ರ ಪಾಠ

Narendra Modi In Kashi

PM Narendra Modi Takes Photo With Students In Kashi; Advices About Artificial Intelligence

ವಾರಾಣಸಿ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಕ್ಷೇತ್ರವಾದ ವಾರಾಣಸಿಗೆ ತೆರಳಿದ್ದು, ಬನಾರಸ್‌ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ ಸಂಸದ್‌ ಸಂಸ್ಕೃತ ಪ್ರತಿಯೋಗಿತಾ (Sansad Sanskrit Pratiyogita) ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಸ್ಕೃತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗೆ ಫೋಟೊ ತೆಗೆಸಿಕೊಂಡ ನರೇಂದ್ರ ಮೋದಿ ಅವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ (Artificial Intelligence) ಮ್ಯಾಜಿಕ್‌ ತೋರಿಸಿದರು.

“ತುಂಬ ಜನ ನನ್ನ ಜತೆ ಫೋಟೊ ತೆಗೆಸಿಕೊಳ್ಳಲು ಬಯಸುತ್ತಾರೆ. ಆದರೆ, ನಾನು ನಿಮ್ಮ ಜತೆ (ವಿದ್ಯಾರ್ಥಿಗಳು) ಫೋಟೊ ತೆಗೆಸಿಕೊಳ್ಳಲು ಬಯಸುತ್ತೇನೆ. ಆದರೆ, ಇದಕ್ಕೆ ನೀವು ನನಗೆ ಸಹಕಾರ ನೀಡಬೇಕು. ನಾನು ನೀವು ಕುಳಿತಿರುವ ಹಿಂಬದಿ ಬಂದು ನಿಲ್ಲುತ್ತೇನೆ. ಫೋಟೊಗ್ರಾಫರ್‌ಗಳು ವೇದಿಕೆ ಮೇಲೆ ಬಂದು ನಿಲ್ಲಲಿದ್ದಾರೆ. ಅವರು ನಮ್ಮೆಲ್ಲರ ಫೋಟೊ ತೆಗೆಯುತ್ತಾರೆ” ಎಂದರು. ಆಗ ವಿದ್ಯಾರ್ಥಿಗಳು ಸರಿ ಎಂದು ಕೂಗಿದರು.

“ನಾನು ನಿಮ್ಮ ಜತೆ ಫೋಟೊ ತೆಗೆಸಿಕೊಂಡು ಹೋಗುತ್ತೇನೆ. ಆಗ ನೀವೇನು ಮಾಡುತ್ತೀರಿ? ಅದಕ್ಕೂ ನನ್ನ ಬಳಿ ಉಪಾಯವಿದೆ. ನೀವು ನಿಮ್ಮ ಮೊಬೈಲ್‌ನಲ್ಲಿ ನಮೋ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಿ. ನೀವು ನಗುತ್ತ ತೆಗೆದುಕೊಂಡ ಫೋಟೊವನ್ನು ನಮೋ ಆ್ಯಪ್‌ನ ಫೋಟೊ ವಿಭಾಗದಲ್ಲಿ ಅಪ್‌ಲೋಡ್‌ ಮಾಡಿ. ನಾನು ಇಲ್ಲಿ ತೆಗೆದುಕೊಂಡ ಫೋಟೊವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ನನ್ನ ಜತೆ ಇರುವ ಸೆಲ್ಫಿಯಾಗಿ ನಿಮ್ಮ ಮೊಬೈಲ್‌ಗೆ ಬರಲಿದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಬಳಿಕ ನರೇಂದ್ರ ಮೋದಿ ಅವರು ವೇದಿಕೆಯ ಹಿಂಬದಿಗೆ ತೆರಳಿ, ವಿದ್ಯಾರ್ಥಿಗಳ ಮಧ್ಯೆ ನಿಂತು ಜತೆ ಫೋಟೊ ತೆಗೆಸಿಕೊಂಡರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಮೋದಿ ಜತೆಗಿನ ಸೆಲ್ಫಿ ಕ್ರಿಯೇಟ್‌ ಮಾಡುವ ವಿಧಾನ ಈಗಾಗಲೇ ಯಶಸ್ವಿಯಾಗಿದೆ. ಹಾಗಾಗಿ, ಮೋದಿ ಅವರು ಮಕ್ಕಳಿಗೂ ಇದರ ಬಗ್ಗೆ ಅರಿವು ಮೂಡಿಸಿದರು.

ಇದನ್ನೂ ಓದಿ: Narendra Modi: ಸಂಸ್ಕೃತ ವೈಜ್ಞಾನಿಕ ಭಾಷೆ, ದೇಶದ ಅಸ್ಮಿತೆ; ಕಾಶಿಯಲ್ಲಿ ಮೋದಿ ಬಣ್ಣನೆ

ಮೋದಿ ಅವರು ಇದೇ ವೇಳೆ ಕಾಶಿಯ ಪ್ರಾಮುಖ್ಯತೆ ಸಾರಿದರು. “ಕಾಶಿಯಲ್ಲಿ ಈಗ ದೇವಾಲಯ, ಭವನಗಳೂ ನಿರ್ಮಾಣವಾಗುತ್ತಿವೆ, ರಸ್ತೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳೂ ಜಾರಿಯಾಗಿವೆ. ಕಾಶಿಯಲ್ಲಿ ಈಗ ಪರಂಪರೆಯೂ ನೆಲೆಸಿದೆ, ಸಂಸ್ಕೃತವೂ ಇದೆ ಹಾಗೂ ವಿಜ್ಞಾನವೂ ಇದೆ. ಕಾಶಿ ವಿಶ್ವನಾಥ ಕಾರಿಡಾರ್‌ ಈಗ ಅಭಿವೃದ್ಧಿಯ ಸಂಕೇತವಾಗಿದೆ” ಎಂದು ಬಣ್ಣಿಸಿದರು. ವಾರಾಣಸಿ ಭೇಟಿಯಲ್ಲಿ ನರೇಂದ್ರ ಮೋದಿ ಅವರು ಸುಮಾರು 14 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದರು. ಹೆದ್ದಾರಿ ಸೇರಿ ಸೇರಿ ಹಲವು ಯೋಜನೆಗಳಿಗೆ ಅವರು ಚಾಲನೆ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version