ನವದೆಹಲಿ: ಕೇಂದ್ರ ಚುನಾವಣೆ ಆಯೋಗದ ನೂತನ ಮುಖ್ಯ ಆಯುಕ್ತರ ಆಯ್ಕೆಯ (New Election Commissioner) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಮಹತ್ವದ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಕಾರಣ ಬುಧವಾರ ನಡೆಯುವ ಸಭೆಯು ಮಹತ್ವ ಪಡೆದಿದೆ. 2023ರ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಆಯುಕ್ತರ (ನೇಮಕ, ಸೇವಾ ಷರತ್ತುಗಳು ಹಾಗೂ ಕಚೇರಿಯ ಸೇವಾವಧಿ) ಕಾಯ್ದೆ ಅಡಿಯಲ್ಲಿ ನೇಮಕ ಮಾಡಲು ಸಭೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಬುಧವಾರ ಸಂಜೆ 7.30ಕ್ಕೆ ಸಭೆ ನಡೆಯಲಿದೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಜನವರಿ 2ರಂದು ನೂತನ ಕಾಯ್ದೆ ಜಾರಿಗೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಹಾಗೂ ಪ್ರತಿಪಕ್ಷ ನಾಯಕ ಅಥವಾ ಲೋಕಸಭೆಯಲ್ಲಿ ಬೃಹತ್ ಪ್ರತಿಪಕ್ಷದ ನಾಯಕ ಒಳಗೊಂಡ ಸಮಿತಿಯ ಶಿಫಾರಸಿನಂತೆ ರಾಷ್ಟ್ರಪತಿ ಅವರು ನೂತನ ಚುನಾವಣಾ ಆಯುಕ್ತರನ್ನು ನೇಮಕ ಮಾಡಲಿದ್ದಾರೆ.
ಹಾಲಿ ಆಯುಕ್ತರಾಗಿರುವ ಅನೂಪ್ ಚಂದ್ರ ಪಾಂಡೆ ಅವರು ಫೆಬ್ರವರಿ 15ರಂದು ನಿವೃತ್ತರಾಗಲಿದ್ದಾರೆ. ಹಾಗಾಗಿ, ನೂತನ ಆಯುಕ್ತರ ನೇಮಕಕ್ಕಾಗಿ ಸಭೆ ನಡೆಯಲಿದೆ. ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಕಾರಣ ನೂತನ ಚುನಾವಣಾ ಆಯುಕ್ತರ ನೇಮಕವು ಪ್ರಾಮುಖ್ಯತೆ ಪಡೆದಿದೆ.
ಆಯುಕ್ತರ ನೇಮಕ ಪ್ರಕ್ರಿಯೆ ಬದಲು
2023ರ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಆಯುಕ್ತರ (ನೇಮಕ, ಸೇವಾ ಷರತ್ತುಗಳು ಹಾಗೂ ಕಚೇರಿಯ ಸೇವಾವಧಿ) ಕಾಯ್ದೆ ಜಾರಿಗೂ ಮೊದಲು ಪ್ರಧಾನಿ ಹಾಗೂ ಸಚಿವರು ಸೇರಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣೆ ಆಯುಕ್ತರ ಹೆಸರನ್ನು ಶಿಫಾರಸು ಮಾಡುತ್ತಿದ್ದರು. ಶಿಫಾರಸಿಗೆ ರಾಷ್ಟ್ರಪತಿಯವರು ಅಂಕಿತ ಹಾಕುತ್ತಿದ್ದರು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚುನಾವಣೆ ಆಯುಕ್ತರ ನೇಮಕ: ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ
ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣೆ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಬದಲಾವಣೆ ಮಾಡಿದೆ. ನೇಮಕಕ್ಕಾಗಿ ಈಗ ಎರಡು ಪ್ರಕ್ರಿಯೆ ಅನುಸರಿಸಲಾಗುತ್ತದೆ. ಕೇಂದ್ರ ಕಾನೂನು ಸಚಿವ ಹಾಗೂ ಇಬ್ಬರು ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳ ಶೋಧನಾ ಸಮಿತಿಯು ಆಯ್ಕೆ ಸಮಿತಿಗೆ ಐವರ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ಆಯ್ಕೆ ಸಮಿತಿಯು ಐವರಲ್ಲೇ ಒಬ್ಬರು ಅಥವಾ ಬೇರೆಯವರನ್ನು ಶಿಫಾರಸು ಮಾಡುವ ಅಧಿಕಾರ ಹೊಂದಿರುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ