Site icon Vistara News

ಜನರ ನಾಡಿ ಮಿಡಿತ ಗೊತ್ತಿರುವ ಏಕೈಕ ಪ್ರಧಾನಿ ಮೋದಿ; ದಿ. ಪ್ರಣಬ್ ಬಣ್ಣನೆ

PM Narendra Modi to feel people pulse accurately Says Pranab Mukherjee

ನವದೆಹಲಿ: ಇಂದಿರಾ ಗಾಂಧಿ (Indira Gandhi) ನಂತರ ಜನರ ನಾಡಿಮಿಡಿತವನ್ನು ತೀವ್ರವಾಗಿ ಮತ್ತು ನಿಖರವಾಗಿ ಅರಿಯುವ ಸಾಮರ್ಥ್ಯ ಹೊಂದಿರುವ ಏಕೈಕ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಂದು ದೇಶದ 13ನೇ ರಾಷ್ಟ್ರಪತಿಯಾಗಿದ್ದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಪ್ರಣಬ್ ಮುಖರ್ಜಿ (Pranab Mukherjee) ಅವರು ಮೋದಿ ಬಗ್ಗೆ ಹೊಂದಿದ್ದ ಅಭಿಪ್ರಾಯವಾಗಿತ್ತು. ಈ ಸಂಗತಿಯನ್ನು ಪ್ರಣಬ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmistha Mukherjee) ಅವರು ತಮ್ಮ ಹೊಸ ಪುಸ್ತಕದಲ್ಲಿ (New Book) ದಾಖಲಿಸಿದ್ದಾರೆ.

ಶರ್ಮಿಷ್ಠಾ ಮುಖರ್ಜಿ ಅವರು, ತಮ್ಮ ತಂದೆ ಪ್ರಣಬ್ ಜತೆ ನಡೆಸಿದ ಸಂಭಾಷಣೆ, ಅವರ ಡೈರಿ ನಮೂದುಗಳನ್ನು ಒಳಗೊಂಡಿರುವ ಪ್ರಣಬ್, ಮೈ ಫಾದರ್: ಎ ಡಾಟರ್ ರೆಮೆಂಬರ್ಸ್ ಎಂಬ ಹೊಸ ಕೃತಿಯಲ್ಲಿ ದಾಖಲಿಸಿದ್ದಾರೆ. ಸಿಯಾಚಿನ್‌ನಲ್ಲಿ ಸೈನಿಕರು ಮತ್ತು ಶ್ರೀನಗರದಲ್ಲಿ ಪ್ರವಾಹ ಪೀಡಿತ ಜನರೊಂದಿಗೆ ದೀಪಾವಳಿಯನ್ನು ಕಳೆಯುವ ಪ್ರಧಾನಿಯ ನಿರ್ಧಾರವು ಇಂದಿರಾ ಗಾಂಧಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಧಾನಿಗಳಲ್ಲಿ ಗೋಚರಿಸದ ಅವರ ರಾಜಕೀಯ ಪ್ರಜ್ಞೆಯಾಗಿದೆ ಎಂದು ಪ್ರಣಬ್ ಅವರು 2014 ಅಕ್ಟೋಬರ್ 13ರಂದು ನಮೂದಿಸಿದ್ದರು.

ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ನಾನು ನೀಡುವ ಸಲಹೆಯು ಅವರಿಗೆ ಮೌಲ್ಯಯುತವಾಗಿರುತ್ತದೆ ಎಂದು ಮೋದಿ ಹೇಳಿದ್ದರು. ನನ್ನಿಂದ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಹೇಳಿದ್ದರು. ಮೋದಿ ಬಗ್ಗೆ ಸಾಕಷ್ಟು ಸ್ಪಷ್ಟತೆ ಇತ್ತು. ಮೋದಿ ತಮ್ಮ ವಿಚಾರಗಳಲ್ಲಿ ಸ್ಪಷ್ಟತೆಯನ್ನುಹೊಂದಿದ್ದರು. ರಾಜಕಾರಣಕ್ಕೆ ವೃತ್ತಿಪರತೆಯನ್ನು ಅವರು ತಂದರು. ಜನರ ನಾಡಿ ಮಿಡಿತವನ್ನು ನಿಖರವಾಗಿ ಅಳೆಯುತ್ತಿದ್ದರು. ಅವರಿಗೆ ಕಲಿಯುವ ಗುಣ ಇತ್ತು. ತಮಗೇ ಎಲ್ಲ ಗೊತ್ತು ಎನ್ನುವ ರೀತಿಯಲ್ಲಿ ವರ್ತಿಸುತ್ತಿರಲಿಲ್ಲ. ಮೋದಿ ಕಟ್ಟರ್ ಆರೆಸ್ಸೆಸ್ ಮನುಷ್ಯ ಮತ್ತು ದೇಶಭಕ್ತ ಹಾಗೂ ರಾಷ್ಟ್ರೀಯವಾದಿ ಎಂದು ಪ್ರಣಬ್ ಬರೆದುಕೊಂಡಿರುವ ಸಂಗತಿ ಹೊಸ ಪುಸ್ತಕದಲ್ಲಿ ದಾಖಲಿಸಲಾಗಿದೆ.

ʼರಾಹುಲ್‌ ಗಾಂಧಿಗೆ ರಾಜಕೀಯದಲ್ಲಿ ಪ್ರಬುದ್ಧತೆ ಇಲ್ಲʼ ಎಂದಿದ್ದರು ಪ್ರಣಬ್‌ ಮುಖರ್ಜಿ

ರಾಹುಲ್ ಗಾಂಧಿ (Rahul Gandhi) ರಾಜಕೀಯವಾಗಿ ಇನ್ನೂ ಪ್ರಬುದ್ಧರಾಗಿಲ್ಲ; ಅವರಿಗೆ ಆ ವಿಷಯದಲ್ಲಿ ಇನ್ನೂ ಪ್ರೌಢಿಮೆ ಅಗತ್ಯ ಇದೆ ಎಂದು ಕಾಂಗ್ರೆಸ್‌ನ (Congress Party) ಉನ್ನತ ನಾಯಕರಾಗಿದ್ದ ಪ್ರಣಬ್ ಮುಖರ್ಜಿ (Pranab Mukherjee) ಒಮ್ಮೆ ಹೇಳಿದ್ದರಂತೆ. ಹೀಗೆಂದು ಪ್ರಣಬ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ (Sharmishta Mukherjee) ಬರೆದ ʼ ಪ್ರಣಬ್, ಮೈ ಫಾದರ್: ಎ ಡಾಟರ್ ರೆಮೆಂಬರ್ಸ್ʼ (Pranab, My Father: A Daughter Remembers) ಕೃತಿಯಲ್ಲಿ ಬರೆದಿದ್ದಾರೆ.

ಪ್ರಣಬ್‌ ಮುಖರ್ಜಿ ಅವರು ರಾಹುಲ್ ಗಾಂಧಿ (Rahul Gandhi) ಮತ್ತು ಸೋನಿಯಾ ಗಾಂಧಿ (Sonia Gandhi) ಸೇರಿದಂತೆ ಇತರ ಕಾಂಗ್ರೆಸ್‌ ನಾಯಕರ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದರು ಎಂಬ ಕುತೂಹಲಕ್ಕೆ ಈ ಮೂಲಕ ಉತ್ತರ ದೊರೆತಿದೆ. ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೆ (PM Post) ಆಯ್ಕೆ ಮಾಡುವುದಿಲ್ಲ ಎಂಬ ಸಂಗತಿ ಪ್ರಣಬ್ ಅವರಿಗೆ ಖಚಿತವಾಗಿ ಗೊತ್ತಿತ್ತಂತೆ!

ರಾಹುಲ್ ಗಾಂಧಿ ಅವರನ್ನು ‘ಅತ್ಯಂತ ಸೌಜನ್ಯಯುತ’ ಮತ್ತು ‘ಪ್ರಶ್ನೆಗಳಿಂದ ತುಂಬಿದ’ ಎಂದು ಪ್ರಣಬ್ ಮುಖರ್ಜಿ ಅವರು ಬಣ್ಣಿಸಿದ್ದರು. ಇದನ್ನು ಅವರು ರಾಹುಲ್ ಅವರ ಕಲಿಯುವ ಬಯಕೆಯ ಸಂಕೇತವಾಗಿ ಪರಿಗಣಿಸಿದ್ದರು. ಆದರೆ ರಾಹುಲ್ ರಾಜಕೀಯವಾಗಿ ಇನ್ನೂ ಪ್ರಬುದ್ಧವಾಗಿಲ್ಲ. ರಾಷ್ಟ್ರಪತಿ ಭವನದಲ್ಲಿ ಪದೇ ಪದೇ ಅಲ್ಲದಿದ್ದರೂ ರಾಹುಲ್ ಪ್ರಣಬ್ ಅವರನ್ನು ಭೇಟಿಯಾಗುತ್ತಲೇ ಇದ್ದರು. ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಮತ್ತು ಆಡಳಿತದಲ್ಲಿ ಸ್ವಲ್ಪ ಅನುಭವವನ್ನು ಪಡೆಯಲು ಪ್ರಣಬ್ ಅವರು ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದರು. ಆದರೆ, ರಾಹುಲ್ ಗಾಂಧಿ ಅವರು ಈ ಸಲಹೆಗಳಿಗೆ ಕಿವಿಗೊಡುತ್ತಿರಲಿಲ್ಲ. ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಕ್ಷಿಪ್ರವಾಗಿ ಲಂಘಿಸುತ್ತಿದ್ದರು ಎಂಬ ಮಾಹಿತಿ ಸಂಗತಿ ಪುಸ್ತಕದಲ್ಲಿದೆ.

ಕಾಂಗ್ರೆಸ್‌ನ ಮಾಜಿ ವಕ್ತಾರೆ ಶರ್ಮಿಷ್ಠಾ ಮುಖರ್ಜಿ ಅವರು ಈ ಕೃತಿಯಲ್ಲಿ ಅನೇಕ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. 2021ರಲ್ಲಿ ಶರ್ಮಿಳಾ ಅವರು ರಾಜಕಾರಣವನ್ನು ತೊರೆದಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡದಿದ್ದಕ್ಕಾಗಿ ಅವರು ಯಾವುದೇ ದ್ವೇಷವನ್ನು ಹೊಂದಿರಲಿಲ್ಲ ಮತ್ತು ಆಯ್ಕೆಯಾದ ಮನಮೋಹನ್ ಸಿಂಗ್ ಅವರ ಬಗ್ಗೆಯಂತೂ ಯಾವುದೇ ತಕಾರರು ಇರಲಿಲ್ಲ ಎಂದು ಪ್ರಣಬ್ ಅವರು ಹೇಳಿದ್ದರು ಎಂಬ ಸಂಗತಿಯೂ ಪುಸ್ತಕದಲ್ಲಿದೆ.

ಪ್ರಣಬ್ ಅವರು ಬರೆದ ಡೈರಿ, ತಾವೇ ಕೇಳಿದ ಮಾಹಿತಿಗಳು ಮತ್ತು ಸ್ವಂತ ಸಂಶೋಧನೆಯನ್ನು ಒಳಗೊಂಡ ಅನೇಕ ಒಳನೋಟಗಳನ್ನು ಈ ಹೊಸ ಪುಸ್ತಕದಲ್ಲಿ ಕಾಣಬಹುದು. ಪ್ರಣಬ್ ಅವರ ರಾಜಕೀಯ ಜೀವನದ ಅನೇಕ ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇದುವರೆಗೂ ಗೊತ್ತಿರದ ಅನೇಕ ಸಂಗತಿಗಳನ್ನು ಬರೆದಿದ್ದಾರೆ. ಸೋನಿಯಾ ಗಾಂಧಿಯವರ ನಂಬಿಕೆಯನ್ನು ಗಳಿಸಲು, ನೆಹರು-ಗಾಂಧಿ ಕುಟುಂಬದ ಸುತ್ತಲಿನ ವ್ಯಕ್ತಿತ್ವ ಆರಾಧನೆ ಮತ್ತು ರಾಹುಲ್ ಗಾಂಧಿಯವರ ವರ್ಚಸ್ಸಿನ ಕೊರತೆ ಮತ್ತು ರಾಜಕೀಯ ತಿಳುವಳಿಕೆ ಇತರ ವಿಷಯಗಳ ಜೊತೆಗೆ ಅನೇಕ ಸಂಗತಿಗಳು ಪುಸ್ತಕದಲ್ಲಿವೆ.

ಪ್ರಣಬ್ ಮುಖರ್ಜಿ ಅವರು ಭಾರತದ ವಿತ್ತ ಸಚಿವರಾಗಿ, ವಿದೇಶಾಂಗ ಸಚಿವರಾಗಿ, ರಕ್ಷಣೆ, ಫೈನಾನ್ಸ್ ಮತ್ತು ವಾಣಿಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ. 2012ರಿಂದ 2017ರವರೆಗೆ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ 84ನೇ ವಯಸ್ಸಿನಲ್ಲಿ 2020ರ ಆಗಸ್ಟ್‌ 31ರಂದು ನಿಧನರಾದರು.

ಶರ್ಮಿಷ್ಠಾ ಮುಖರ್ಜಿ ಅವರು ಬರೆದಿರುವ ಪುಸ್ತಕದಲ್ಲಿ ಭಾರತ ಎಂದೂ ಹೊಂದದ ಪ್ರಧಾನಿ(ದಿ ಪಿಎಂ ಇಂಡಿಯಾ ನೆವರ್ ಹ್ಯಾಡ್) ಅಧ್ಯಾಯದಲ್ಲಿ ಸಾಕಷ್ಟು ಅಂಶಗಳ ಕುರಿತು ಚರ್ಚಿಸಿದ್ದಾರೆ. 2004ರಲ್ಲಿ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆ ರೇಸಿನಿಂದ ಹಿಂದೆ ಸರಿದ ಬಳಿಕ, ಮುಂದಿನ ಪ್ರಧಾನಿ ಯಾರಾಗುತ್ತಾರೆಂಬ ಮಾಧ್ಯಮಗಳು ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆದಿತ್ತು.

ಇಲ್ಲ, ಆಕೆ ನನ್ನನ್ನು ಪ್ರಧಾನಿ ಮಾಡಲ್ಲ ಎಂದಿದ್ದರು ಮುಖರ್ಜಿ

ಡಾ. ಮನಮೋಹನ್ ಸಿಂಗ್ ಮತ್ತು ಪ್ರಣಬ್ ಮುಖರ್ಜಿ ಅವರು ಹೆಸರುಗಳು ಪ್ರಧಾನವಾಗಿ ಕೇಳಿ ಬರುತ್ತಿದ್ದವು. ಆ ದಿನಗಳಲ್ಲಿ ನಾನು ಎರಡು ದಿನಗಳ ಕಾಲ ತಂದೆಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆಗ ನಾನು ಫೋನ್ ಮೂಲಕ ಅವರೊಂದಿಗೆ ಮಾತನಾಡಿದೆ. ನೀವು ಪ್ರಧಾನಿಯಾಗುತ್ತೀರಾ ಎಂದು ಕೇಳಿದೆ. ಆಗ ಅವರು, ”ಇಲ್ಲ ಆಕೆ(ಸೋನಿಯಾ ಗಾಂಧಿ) ನನ್ನನ್ನು ಪ್ರಧಾನಿಯನ್ನಾಗಿ ಮಾಡುವುದಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ. ಆದರೆ, ಈ ಬಗ್ಗೆ ಆದಷ್ಟು ಬೇಗನೆ ನಿರ್ಧಾರ ಕೈಗೊಳ್ಳಬೇಕು. ಅನಿಶ್ಚಿತತೆ ದೇಶದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ” ಎಂದು ಹೇಳಿದರು ಎಂದು ಶರ್ಮಿಷ್ಠಾ ಬರೆದಿದ್ದಾರೆ.

ಶರ್ಮಿಷ್ಠಾ ಮುಖರ್ಜಿಯವರು ಹೇಳುವಂತೆ, ಜನರು ತಮ್ಮ ತಂದೆಗೆ ನಿಜವಾಗಿಯೂ ಪ್ರಧಾನಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇದೆಯೇ ಎಂದು ಆಗಾಗ್ಗೆ ಕೇಳುತ್ತಿದ್ದರು. ಯುಪಿಎ-1 ಅವಧಿಯಲ್ಲಿ ಶರ್ಮಿಷ್ಟಾ ಅವರು ಈ ಪ್ರಶ್ನೆಯನ್ನು ಪ್ರಣಬ್ ಅವರಿಗೂ ಕೇಳಿದ್ದರು.

ಹೌದು ಖಂಡಿತವಾಗಿಯೂ, ನಾನು ಕೂಡ ಭಾರತದ ಪ್ರಧಾನಿಯಾಗಬೇಕು. ಅರ್ಹ ಆಗಿರುವ ಯಾವುದೇ ರಾಜಕೀಯ ನಾಯಕ ಇಂಥ ಮಹತ್ವಾಕಾಂಕ್ಷೆ ಹೊಂದಿರುತ್ತಾನೆ. ಆದರೆ ನಾನು ಅದನ್ನು ಬಯಸುವುದರಿಂದ ನಾನು ಅದನ್ನು ಪಡೆಯಲಿದ್ದೇನೆ ಎಂದು ಅರ್ಥವಲ್ಲ ಎಂದು ಹೇಳಿದ್ದರು ಎಂಬ ಸಂಗತಿಯನ್ನು ಶರ್ಮಿಷ್ಠಾ ಅವರು ದಾಖಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Exit mobile version