Site icon Vistara News

Lok Sabha Election: ಬುಲಂದ್‌ಶಹರ್‌ನಲ್ಲಿ ಲೋಕಸಭೆ ಚುನಾವಣೆಗೆ ಇಂದು ಮೋದಿ ರಣಕಹಳೆ

Aisa Mauka Phir Kahan Milega... Narendra Modi says to Kharge

ಲಖನೌ: ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ತಿಂಗಳು ಬಾಕಿ ಇರುವುದರಿಂದ ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ಸೇರಿ ಎಲ್ಲ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಸುಮಾರು 19 ಸಾವಿರ ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹಾಗೆಯೇ, ಬುಲಂದ್‌ಶಹರ್‌ ಮೂಲಕವೇ ಲೋಕಸಭೆ ಚುನಾವಣೆ ಪ್ರಚಾರಕ್ಕೂ ಅವರು ನಾಂದಿ ಹಾಡಲಿದ್ದಾರೆ.

ಬುಲಂದ್‌ಶಹರ್‌ಗೆ ಮಧ್ಯಾಹ್ನ 1.45ರ ಸುಮಾರಿಗೆ ತಲುಪಲಿರುವ ನರೇಂದ್ರ ಮೋದಿ ಅವರು ದೇಶಕ್ಕೆ ಸುಮಾರು 19,100 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಸಮರ್ಪಿಸಲಿದ್ದಾರೆ. ರೈಲು, ರಸ್ತೆ, ಇಂಧನ, ಗ್ಯಾಸ್‌, ನಗರಾಭಿವೃದ್ಧಿ ಹಾಗೂ ವಸತಿ ಸೇರಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದರ ಜತೆಗೆ ಅವರು 2024ರ ಲೋಕಸಭೆ ಚುನಾವಣೆ ಪ್ರಚಾರಕ್ಕೂ ಅವರು ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಚುನಾವಣೆ ದೃಷ್ಟಿಯಿಂದ ಈಗಾಗಲೇ ಬಿಜೆಪಿಯು ರಣತಂತ್ರ ರೂಪಿಸುತ್ತಿದೆ. ಕಳೆದ ಬಾರಿ ಸ್ಪರ್ಧಿಸಿದ್ದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧೆ, ನಾಯಕರಿಗೆ ಚುನಾವಣೆ ಪ್ರಚಾರದ ನೇತೃತ್ವ, ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ, ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಸೇರಿ ಹಲವು ಕಾರ್ಯತಂತ್ರ ರೂಪಿಸುತ್ತಿದೆ. ಜನವರಿ ಕೊನೆಯಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಬುಲಂದ್‌ಶಹರ್ ಏಕೆ?

ವಾರಣಾಸಿಯು ಪ್ರಧಾನಿ ಮೋದಿಯವರ ತವರು ಕ್ಷೇತ್ರವಾಗಿದೆ. ಆದರೆ ಅವರು ಬುಲಂದ್‌ಶಹರ್‌ನಿಂದ ಪ್ರಚಾರ ಆರಂಭಿಸುವ ನಿರ್ಧಾರದ ಹಿಂದಿನ ಕಾರಣ ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ 80ರಲ್ಲಿ 71 ಸ್ಥಾನಗಳನ್ನು ಗೆದ್ದು ಮುನ್ನಡೆದ ಬಿಜೆಪಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳ ಕುಸಿತ ಕಂಡಿತು. 62 ಲೋಕಸಭಾ ಸ್ಥಾನಗಳಲ್ಲಿ ವಿಜಯವನ್ನು ದಾಖಲಿಸಿತು. ಅದರ ಮೈತ್ರಿ ಪಾಲುದಾರ ಅಪ್ನಾ ದಳ (ಸೋನೆಲಾಲ್) ಎರಡು ಸ್ಥಾನಗಳಲ್ಲಿ ಗೆದ್ದಿದೆ. 2014ರಲ್ಲಿ ಪಶ್ಚಿಮ ಉತ್ತರ ಪ್ರದೇಶದ 14 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 2019ರಲ್ಲಿ ಆರು ಕ್ಷೇತ್ರಗಳಲ್ಲಿ ಸೋತು ಎಂಟು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಸೀಟು ಹಂಚಿಕೆ ಇಲ್ಲ ಎಂದ ಟಿಎಂಸಿ

ವರದಿಗಳ ಪ್ರಕಾರ 2024ರ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಅಲೆಯನ್ನು ತಿರುಗಿಸಲು ಪ್ರಧಾನಿ ತಯಾರಿ ನಡೆಸುತ್ತಿದ್ದಾರೆ. ಬುಲಂದ್‌ಶಹರ್‌ನಿಂದ ಈ ಪ್ರದೇಶದ ದೊಡ್ಡ ಕೇಂದ್ರ. ಇಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವ ಪ್ರಧಾನಿ ಇಲ್ಲಿನ ಮತದಾರರು ಮತ್ತು ಬೆಂಬಲಿಗರೊಂದಿಗೆ ನಿಕಟ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version