ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಇಲ್ಲಿನ ಭಾರತ ಮಂಟಪದಲ್ಲಿ ‘ಸಂಕಲ್ಪ ಸಪ್ತಾಹ’ (Sankalp Saptaah) ಎಂಬ ಒಂದು ವಾರದ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ʼಸಂಕಲ್ಪ್ ಸಪ್ತಾಹ್’ ಇದು ʼಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮʼದ (aspirational blocks program – ABP) ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದೆ. ಈ ರಾಷ್ಟ್ರವ್ಯಾಪಿ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಜನವರಿ 7, 2023ರಂದು ಪ್ರಾರಂಭಿಸಿದ್ದರು.
ಶನಿವಾರ ಬೆಳಿಗ್ಗೆ 10 ಗಂಟೆಗೆ ಭಾರತ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಬ್ಲಾಕ್ ಮಟ್ಟದಲ್ಲಿ ಆಡಳಿತವನ್ನು ಸುಧಾರಿಸುವ ಗುರಿಯನ್ನು ABP ಹೊಂದಿದೆ. ದೇಶದ 329 ಜಿಲ್ಲೆಗಳಲ್ಲಿ 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ.
ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮತ್ತು ಪರಿಣಾಮಕಾರಿ ಬ್ಲಾಕ್ ಅಭಿವೃದ್ಧಿ ಕಾರ್ಯತಂತ್ರವನ್ನು ತಯಾರಿಸಲು, ದೇಶಾದ್ಯಂತ ಗ್ರಾಮ ಮತ್ತು ಬ್ಲಾಕ್ ಮಟ್ಟದಲ್ಲಿ ಚಿಂತನ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. `ಸಂಕಲ್ಪ ಸಪ್ತಾಹ’ ಈ ಚಿಂತನ ಶಿಬಿರಗಳ ಸಮಾರೋಪವಾಗಿದೆ. 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ‘ಸಂಕಲ್ಪ್ ಸಪ್ತಾಹ್’ ಅನ್ನು ಆಚರಿಸಲಾಗುತ್ತದೆ.
ಅಕ್ಟೋಬರ್ 3ರಿಂದ ಅಕ್ಟೋಬರ್ 9, 2023ರವರೆಗೆ ‘ಸಂಕಲ್ಪ್ ಸಪ್ತಾಹ್’ನಲ್ಲಿ ಪ್ರತಿ ದಿನವೂ ಒಂದು ನಿರ್ದಿಷ್ಟ ಅಭಿವೃದ್ಧಿ ಥೀಮ್‌ಗೆ ಮೀಸಲಾಗಿರುತ್ತದೆ. ಅದರ ಮೇಲೆ ಎಲ್ಲಾ ಬ್ಲಾಕ್‌ಗಳು ಕಾರ್ಯನಿರ್ವಹಿಸಲಿವೆ. ಮೊದಲ ಆರು ದಿನಗಳ ವಿಷಯಗಳಲ್ಲಿ ʼಸಂಪೂರ್ಣ ಸ್ವಾಸ್ಥ್ಯ’, ʼಸುಪೋಷಿತ ಪರಿವಾರ’, ʼಸ್ವಚ್ಛತೆ’, ʼಕೃಷಿ’, ʼಶಿಕ್ಷಣ’ ಮತ್ತು ʼಸಮೃದ್ಧಿ ದಿವಸ್’ ಸೇರಿವೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ಮಂಟಪದಲ್ಲಿ ಸುಮಾರು 3,000 ಪಂಚಾಯತ್ ಮತ್ತು ಬ್ಲಾಕ್ ಮಟ್ಟದ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ದೇಶಾದ್ಯಂತದಿಂದ ಭಾಗವಹಿಸಲಿದ್ದಾರೆ. ಇದರ ಜೊತೆಗೆ ಬ್ಲಾಕ್ ಮತ್ತು ಪಂಚಾಯತ್ ಮಟ್ಟದ ಪದಾಧಿಕಾರಿಗಳು, ರೈತರು ಸೇರಿದಂತೆ ಸುಮಾರು ಎರಡು ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: PM Narendra Modi: 30 ದಿನದಲ್ಲಿ 85 ವಿಶ್ವ ನಾಯಕರನ್ನು ಭೇಟಿ ಮಾಡಿದ ಮೋದಿ!