ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರಕ್ಕೆ (Ram Mandir) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ್ದಾರೆ. ಇದಾದ ಬಳಿಕ ಲಕ್ಷಾಂತರ ಭಾರತೀಯರು ಅಯೋಧ್ಯೆಗೆ ತೆರಳಿ ರಾಮನ ದರ್ಶನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರು ಸೋಮವಾರ (ಫೆಬ್ರವರಿ 19) ಉತ್ತರ ಪ್ರದೇಶದಲ್ಲಿ ಕಲ್ಕಿ ಧಾಮ ಮಂದಿರಕ್ಕೆ (Kalki Dham Temple) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ಶ್ರೀ ಕಲ್ಕಿ ಧಾಮ ಮಂದಿರಕ್ಕೆ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದು, ಇದಾದ ಬಳಿಕ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಲಾಗಿದೆ. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಭವ್ಯ ಮಂದಿರ ನಿರ್ಮಾಣಕ್ಕೆ ಮೋದಿ ನಾಂದಿ ಹಾಡಲಿದ್ದಾರೆ. ಸುಮಾರು 5 ಸಾವಿರ ಗಣ್ಯರು, ಭಕ್ತರು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್ ಚೇರ್ಮನ್ ಆಚಾರ್ಯ ಪ್ರಮೋದ್ ಕೃಷ್ಣಂ ಅವರ ನೇತೃತ್ವದಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ. ಇವರು ಕಾಂಗ್ರೆಸ್ ನಾಯಕರು ಕೂಡ ಆಗಿದ್ದರು. ಆಚಾರ್ಯ ಪ್ರಮೋದ್ ಕೃಷ್ಣಂ ಅವರು ದೇವಾಲಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುತ್ತಲೇ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಪಕ್ಷವಿರೋಧಿ ಚಟುವಟಿಕೆಯ ಆರೋಪದಲ್ಲಿ ಅವರನ್ನು ಉಚ್ಚಾಟಿಸಲಾಗಿದೆ.
ಇದನ್ನೂ ಓದಿ: Rahul Gandhi : ಮೋದಿಯನ್ನು ಟೀಕಿಸಲು ಐಶ್ವರ್ಯಾ, ಅಭಿಷೇಕ್ ಬಚ್ಚನ್ ಎಳೆದು ತಂದ ರಾಹುಲ್ ಗಾಂಧಿ
10 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ
ನರೇಂದ್ರ ಮೋದಿ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸುಮಾರು 10 ಕೋಟಿ ರೂ. ಮೌಲ್ಯದ 14,500 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಾದ್ಯಂತ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಲಖನೌನಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಮೋದಿ ಅವರು ಯುಎಇಯಲ್ಲಿ ಕೂಡ ಬೃಹತ್ ಹಿಂದು ದೇವಾಲಯವನ್ನು ಲೋಕಾರ್ಪಣೆ ಮಾಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ