Site icon Vistara News

Narendra Modi: ಅವಿಶ್ವಾಸ ಗೊತ್ತುವಳಿಗೆ ಇಂದು ಮೋದಿ ಪ್ರತಿಕ್ರಿಯೆ; ಮಣಿಪುರ ಹಿಂಸೆ ಬಗ್ಗೆ ಏನು ಹೇಳುವರು ಪ್ರಧಾನಿ?

PM Modi expressed shock at the loss of lives in an attack on a Gaza hospital

ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಮಂಡಿಸಿದ ಅವಿಶ್ವಾಸ ಗೊತ್ತುವಳಿ (No Confidence Motion) ಕುರಿತು ಕಳೆದ ಎರಡು ದಿನಗಳಿಂದ ಭಾರಿ ಚರ್ಚೆ, ಗಲಾಟೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ (ಆಗಸ್ಟ್‌ 10) ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಿದ್ದಾರೆ. ಹಾಗೆಯೇ, ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಏನು ಹೇಳಲಿದ್ದಾರೆ ಎಂಬ ಕುತೂಹಲ ಮೂಡಿದೆ.

“ನರೇಂದ್ರ ಮೋದಿ ಅವರು ಗುರುವಾರ ಸಂಸತ್ತಿನ ಕಲಾಪದಲ್ಲಿ ಹಾಜರಿರಲಿದ್ದು, ಅವಿಶ್ವಾಸ ಗೊತ್ತುವಳಿಗೆ ಪ್ರತಿಕ್ರಿಯೆ ನೀಡಲಿದ್ದಾರೆ” ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಮಣಿಪುರ ಹಿಂಸಾಚಾರದ ಕುರಿತು ನರೇಂದ್ರ ಮೋದಿ ಮಾತನಾಡಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್‌, ಜುಲೈ 26ರಂದು ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ.

ರಾಹುಲ್‌ ಗಾಂಧಿ ವಾಗ್ದಾಳಿ

ಬುಧವಾರ ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಿದ್ದ ರಾಹುಲ್‌ ಗಾಂಧಿ, “ಮಣಿಪುರದಲ್ಲಿ ಜನರ ಧ್ವನಿಯನ್ನು ಹುದುಗಿಸಲಾಗಿದೆ. ಇದರೊಂದಿಗೆ ಮಣಿಪುರದಲ್ಲಿ ಭಾರತವನ್ನು ಹತ್ಯೆ ಮಾಡಲಾಗಿದೆ. ನೀವು ದೇಶ ಭಕ್ತರಲ್ಲ, ನೀವು ದೇಶದ್ರೋಹಿಗಳು. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ತೆರಳಲಿಲ್ಲ. ಮಣಿಪುರದಲ್ಲಿ ಹಿಂದುಸ್ಥಾನದ ಕಗ್ಗೊಲೆಯಾಗಿದೆ. ನೀವು ಭಾರತ ಮಾತೆಯನ್ನು ರಕ್ಷಿಸುವವರಲ್ಲ, ನೀವು ಹತ್ಯೆ ಮಾಡುವವರು” ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, “ನಿಮಗೆ ನಾಚಿಕೆಯಾಗಬೇಕು” ಎಂದು ತಿರುಗೇಟು ನೀಡಿದ್ದರು.

ಅಮಿತ್‌ ಶಾ ಹೇಳಿದ್ದೇನು?

ರಾಹುಲ್‌ ಗಾಂಧಿ ಆರೋಪಗಳಿಗೆ ಅಮಿತ್‌ ಶಾ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ್ದರು. “ಮಣಿಪುರದ ಕುರಿತು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು. ಅವರು (ಕಾಂಗ್ರೆಸ್) ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಏನು ಮಾಡಿಲ್ಲ. ನಾವು ಈ ರಾಜ್ಯಗಳ ಅಭಿವೃದ್ಧಿಯನ್ನು ಕೈಗೊಳ್ಳುತ್ತಿದ್ದೇವೆ. 10 ವರ್ಷಗಳ ಯುಪಿಎ ಅವಧಿಯಲ್ಲಿ ಏನನ್ನೂ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಕೇವಲ ಒಳಜಗಳವನ್ನು ಪ್ರೇರೇಪಿಸುತ್ತಿದೆ” ಎಂದಿದ್ದರು.

ಇದನ್ನೂ ಓದಿ: No Confidence Motion: ಮಣಿಪುರದಲ್ಲಿ ವಿಷಯದಲ್ಲಿ ರಾಹುಲ್ ಗಾಂಧಿ ಡ್ರಾಮಾ! ಸಚಿವ ಅಮಿತ್ ಶಾ ಕಿಡಿ

“ಈಶಾನ್ಯ ರಾಜ್ಯಗಳಲ್ಲಿನ ಹಿಂಸಾಚಾರ ಪ್ರಕರಣಗಳಲ್ಲಿ ಶೇ.68ರಷ್ಟು ಕಡಿಮೆಯಾಗಿವೆ. ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ಸಮಯ ಮತ್ತು ಅಂತರವನ್ನು ಕಡಿಮೆ ಮಾಡಿವೆ. ಕಳೆದ 9 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 50ಕ್ಕೂ ಹೆಚ್ಚು ಬಾರಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಅವರು ಈಶಾನ್ಯ ರಾಜ್ಯಗಳನ್ನು ಭಾರತದ ಜತೆಗೆ ಬೆಸೆದಿದ್ದಾರೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಿರುಗೇಟು ನೀಡಿದ್ದರು.

Exit mobile version