Site icon Vistara News

Narendra Modi: ಕಾಜಿರಂಗ ಅಭಯಾರಣ್ಯದಲ್ಲಿ ರಾತ್ರಿ ಕಳೆಯಲಿರುವ ಮೋದಿ; ಇದರಲ್ಲೂ ಇದೆ ಒಂದು ದಾಖಲೆ!

Narendra Modi

PM Narendra Modi to stay overnight at Kaziranga National Park

ದಿಸ್ಪುರ: ಪ್ರಧಾನಿ ನರೇಂದ್ರ ಮೋದಿ ಅವರು ಹಲವು ದೇಶಗಳಿಗೆ ಭೇಟಿ ನೀಡುವುದು, ರಾಜಕೀಯ ಸಮಾವೇಶಗಳಲ್ಲಿ ಅಬ್ಬರದ ಭಾಷಣ ಮಾಡುವುದರ ಜತೆಗೆ ಪ್ರಾಣಿಗಳು, ಅರಣ್ಯದ ಬಗ್ಗೆಯೂ ಅಷ್ಟೇ ಆಸಕ್ತಿ ಹೊಂದಿದ್ದಾರೆ. ಹಾಗಾಗಿಯೇ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಚೀತಾಗಳನ್ನು ಬಿಟ್ಟಿದ್ದರು. ಕರ್ನಾಟಕದ ಬಂಡೀಪುರಕ್ಕೂ ಅವರು ಭೇಟಿ ನೀಡಿ, ಸಫಾರಿ ಕೈಗೊಂಡಿದ್ದರು. ಇಷ್ಟೆಲ್ಲ ಆಸಕ್ತಿ ಹೊಂದಿರುವ ನರೇಂದ್ರ ಮೋದಿ (Narendra Modi) ಅವರು ಅಸ್ಸಾಂನಲ್ಲಿರುವ ವಿಶ್ವವಿಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ (Kaziranga National Park) ಒಂದು ರಾತ್ರಿ ಕಳೆಯಲಿದ್ದಾರೆ.

ನರೇಂದ್ರ ಮೋದಿ ಅವರು ಕಾಜಿರಂಗ ಅಭಯಾರಣದಲ್ಲಿ ಒಂದು ರಾತ್ರಿ ತಂಗುವ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾಹಿತಿ ನೀಡಿದ್ದಾರೆ. “ನರೇಂದ್ರ ಮೋದಿ ಅವರು ಮಾರ್ಚ್‌ 8ರಂದು ಅಸ್ಸಾಂಗೆ ಆಗಮಿಸಲಿದ್ದಾರೆ. ಅದೇ ದಿನ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ತೆರಳಲಿದ್ದು, ಅಲ್ಲಿಯೇ ರಾತ್ರಿ ಕಳೆಯಲಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಕಾಜಿರಂಗ ದಟ್ಟಾರಣ್ಯದಲ್ಲಿ ಒಂದು ರಾತ್ರಿ ಕಳೆಯಲಿದ್ದಾರೆ” ಎಂದು ಹೇಳಿದರು.

“ಮಾರ್ಚ್‌ 8ರ ರಾತ್ರಿಯನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಕಳೆಯಲಿರುವ ನರೇಂದ್ರ ಮೋದಿ ಅವರು ಮಾರ್ಚ್‌ 9ರಂದು ಅರಣ್ಯದಲ್ಲಿ ಸಫಾರಿ ಕೈಗೊಳ್ಳಲಿದ್ದಾರೆ. ನರೇಂದ್ರ ಮೋದಿ ಅವರ ಭೇಟಿಯಿಂದಾಗಿ ಕಾಜಿರಂಗ ಅಭಯಾರಣ್ಯಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಇದಾದ ಬಳಿಕ ಮೋದಿ ಅವರು ಜೊರ್ಹಾತ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದಾರೆ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Narendra Modi: ತೆಲಂಗಾಣ, ಒಡಿಶಾಕ್ಕೆ ಮೋದಿ ಭೇಟಿ; 26,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

ಕಾಜಿರಂಗ ರಾಷ್ಟ್ರೀಯ ಉದ್ಯಾನವು ಒಂಟಿ ಕೊಂಬಿನ ಘೇಂಡಾಮೃಗಗಳಿಗೆ ಹೆಸರು ವಾಸಿಯಾಗಿದೆ. 429.69 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿರುವ ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿದೆ. ವಿಶ್ವದಲ್ಲಿರುವ ಒಂಟಿ ಕೊಂಬಿನ ಘೇಂಡಾಮೃಗಗಳಲ್ಲಿ ಮೂರನೇ ಎರಡು ಭಾಗದಷ್ಟು ಘೇಂಡಾಮೃಗಗಳು ಇದೇ ರಾಷ್ಟ್ರೀಯ ಉದ್ಯಾನದಲ್ಲಿವೆ. ಆನೆ, ಕರಡಿ ಹಾಗೂ ಚಿರತೆಗಳಿಗೂ ಕಾಜಿರಂಗ ಅಭಯಾರಣ್ಯವು ಆಶ್ರಯ ತಾಣವಾಗಿದೆ. ಈ ಉದ್ಯಾನದಲ್ಲಿ ಸಫಾರಿಗೆ ತೆರಳಲು 3,500-4,500 ರೂ. ಪಾವತಿಸಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version