ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಮೇ 26) ಚೆನ್ನೈಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಜವಾಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 31,400 ಕೋಟಿ ರೂಪಾಯಿ ವೆಚ್ಚದ ಒಟ್ಟು 11 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸುವರು. ಈ ಯೋಜನೆಗಳೆಲ್ಲ ಸ್ಥಳೀಯವಾಗಿ ಸಾಮಾಜಿಕ-ಆರ್ಥಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವಂಥದ್ದೇ ಆಗಿವೆ ಹಾಗೇ, ಅಪಾರ ಉದ್ಯೋಗವಕಾಶ ಸೃಷ್ಟಿಸಲಿವೆ. ಮೂಲಸೌಕರ್ಯ, ಸಂಪರ್ಕ ಅಭಿವೃದ್ಧಿಗೆ ಒತ್ತು ನೀಡಲಿವೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಪ್ರಧಾನಿ ಮೋದಿ ಭೇಟಿ ನಿಮಿತ್ತ ಚೆನ್ನೈ ನಗರವನ್ನ ಬಂದೋಬಸ್ತ್ ಮಾಡಲಾಗಿದೆ. ನಗರದಾದ್ಯಂತ ಐದು ಹಂತದ ಭದ್ರತೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಯಾವುದೇ ತೊಡಕಾಗದೆ ಇರುವಂತೆ ಸಂಪೂರ್ಣವಾಗಿ ಮುನ್ನೆಚ್ಚರಿಕೆ ವಹಿಸಲಾಗಿದೆ. 22 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಗ್ರೇಟರ್ ಚೆನ್ನೈ ಪೊಲೀಸ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜೈವಾಲ್, ಎಂಟು ಜಂಟಿ ಆಯುಕ್ತರು, ಡೆಪ್ಯೂಟಿ ಇನ್‌ಸ್ಪೆಕ್ಟರ್ ಜನರಲ್‌ಗಳು (ಡಿಐಜಿ), 29ಕ್ಕೂ ಹೆಚ್ಚು ಉಪ ಆಯುಕ್ತರು, ವರಿಷ್ಠಾಧಿಕಾರಿಗಳು ಸೇರಿ ಹಲವು ಪೊಲೀಸ್ ಹಿರಿಯ ಅಧಿಕಾರಿಗಳು ಕರ್ತವ್ಯದಲ್ಲಿ ಇರಲಿದ್ದಾರೆ.
ಇದನ್ನೂ ಓದಿ: ಮೋದಿ ಸರಕಾರಕ್ಕೆ 8 ವರ್ಷ ಭರ್ತಿ, ಮೋದಿ-ಶಾ ಸಾರಥ್ಯದಲ್ಲಿ ಬಿಜೆಪಿಯ ಜೈತ್ರಯಾತ್ರೆ
ಚೆನ್ನೈ ಏರ್‌ಪೋರ್ಟ್‌ನಿಂದ ಜವಾಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದವರೆಗೆ ಪ್ರಧಾನಿ ನರೇಂದ್ರ ಮೋದಿ ಸಾಗುವ ಮಾರ್ಗದಲ್ಲಿಯೂ ಬಿಗಿ ಭದ್ರತೆ ವಹಿಸಲಾಗಿದೆ. ಚೆನ್ನೈನ ಬಸ್ ಸ್ಟ್ಯಾಂಡ್‌ಗಳು, ರೈಲ್ವೆ ಸ್ಟೇಶನ್‌ಗಳು ಸೇರಿ ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಇಡಲಾಗಿದೆ. ಚೆನ್ನೈನ ಇವಿಆರ್ ರೋಡ್, ಮದ್ರಾಸ್ ವೈದ್ಯಕೀಯ ಕಾಲೇಜು ಜಂಕ್ಷನ್, ಅಣ್ಣಾ ಸಾಲೈ, ಸರ್ದಾರ್ ಪಟೇಲ್ ರೋಡ್, ಜಿಎಸ್‌ಟಿ ರಸ್ತೆ ಸೇರಿ ಹಲವು ಪ್ರಮುಖ ಮಾರ್ಗಗಳಲ್ಲಿ ಜನಸಾಮಾನ್ಯರ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ರಸ್ತೆಯಲ್ಲಿ ಸಾಗುವಂತೆ ಸೂಚಿಸಲಾಗಿದೆ.
ಇಂದು ಪ್ರಧಾನಮಂತ್ರಿ ಶಿಲಾನ್ಯಾಸ ನೆರವೇರಿಸಲಿರುವ ಯೋಜನೆಗಳಲ್ಲಿ 262 ಕಿಲೋ ಮೀಟರ್ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕೂಡ ಸೇರಿದೆ. ಇದನ್ನು ಸುಮಾರು 14,870 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಎಕ್ಸ್‌ಪ್ರೆಸ್ ವೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೂಲಕ ಹಾದುಹೋಗಲಿದೆ. ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು 2-3 ತಾಸುಗಳಷ್ಟು ಕಡಿಮೆ ಮಾಡಲಿದೆ.
ಇದನ್ನೂ ಓದಿ: ಜಪಾನ್‌ನಿಂದ ಹಿಂದಿರುಗಿದ ತಕ್ಷಣ ತುರ್ತು ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ