Site icon Vistara News

Narendra Modi: ಅಧಿವೇಶನಕ್ಕೂ ಮೊದಲು ಸೋನಿಯಾ ಗಾಂಧಿ ಬಳಿ ತೆರಳಿ ಆರೋಗ್ಯ ವಿಚಾರಿಸಿದ ಮೋದಿ

Narendra Modi And Sonia Gandhi

PM Narendra Modi walks up to Sonia Gandhi in Parliament, asks about her health

ನವದೆಹಲಿ: ಸಂಸತ್‌ ಮುಂಗಾರು ಅಧಿವೇಶನ ಆರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಂಸತ್‌ನಲ್ಲಿ ಮೋದಿ ಅವರು ಸೋನಿಯಾ ಗಾಂಧಿ ಅವರು ಕುಳಿತ ಡೆಸ್ಕ್‌ಗೆ ತೆರಳಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಪಕ್ಷಗಳ ಡೆಸ್ಕ್‌ಗಳಿಗೆ ತೆರಳಿದ ಮೋದಿ ಅವರು ಸೋನಿಯಾ ಗಾಂಧಿ ಸೇರಿ ಪ್ರತಿಪಕ್ಷಗಳ ಹಲವು ನಾಯಕರೊಂದಿಗೆ ಮಾತುಕತೆ ನಡೆಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕೆಲ ದಿನಗಳ ಹಿಂದಷ್ಟೇ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರು ತೆರಳುತ್ತಿದ್ದ ವಿಮಾನವು ಭೋಪಾಲ್‌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಆಗಿತ್ತು. ಇದಾದ ಬಳಿಕವೂ ನರೇಂದ್ರ ಮೋದಿ ಪ್ರಕರಣದ ಕುರಿತು ಮಾಹಿತಿ ಪಡೆದಿದ್ದರು. ಸೋನಿಯಾ ಗಾಂಧಿ ಅವರ ಶ್ವಾಸಕೋಶದಲ್ಲಿ ಸೋಂಕಿರುವ ಕಾರಣ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಸೋನಿಯಾ ಗಾಂಧಿ ಅವರಿಗೆ ವಿಮಾನದಲ್ಲೂ ಕೃತಕ ಆಮ್ಲಜನಕ ಅಳವಡಿಸಲಾಗಿತ್ತು.

ಸಂಸತ್‌ ಮುಂಗಾರು ಅಧಿವೇಶನ ಗುರುವಾರದಿಂದ ಆರಂಭವಾಗಿದ್ದು, ಆಗಸ್ಟ್‌ 11ರವರೆಗೆ ನಡೆಯಲಿದೆ. ಇನ್ನು, ಸಂಸತ್‌ ಅಧಿವೇಶನ ಆರಂಭವಾಗುತ್ತಲೇ ಮಣಿಪುರ ಹಿಂಸಾಚಾರ ಪ್ರಕರಣದ ಕುರಿತು ಗಲಾಟೆ ನಡೆಸಿವೆ. ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಸಂಸತ್‌ ಅಧಿವೇಶನದಲ್ಲಿ ಗಲಾಟೆ, ಗದ್ದಲ ಆರಂಭವಾಗುತ್ತಲೇ ಮಧ್ಯಾಹ್ನ 2 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು.

ಇದನ್ನೂ ಓದಿ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ; ’ದುಷ್ಟರನ್ನು ಸುಮ್ಮನೆ ಬಿಡುವುದಿಲ್ಲ’ ಎಂದ ಪ್ರಧಾನಿ ಮೋದಿ

ಸಂಸತ್‌ ಅಧಿವೇಶನ ಆರಂಭವಾಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ನರೇಂದ್ರ ಮೋದಿ, ಮಣಿಪುರ ಹಿಂಸಾಚಾರದ ಕುರಿತು ಉಲ್ಲೇಖಿಸಿದರು. “ಮಣಿಪುರ ಹಿಂಸಾಚಾರದಿಂದ ಮನಸ್ಸಿಗೆ ಘಾಸಿಯಾಗಿದೆ. ಮಣಿಪುರದ ಪುತ್ರಿಯರ ಮೇಲಿನ ದೌರ್ಜನ್ಯವನ್ನು ನಾವು ಸಹಿಸಿಕೊಳ್ಳುವುದಿಲ್ಲ. ತಪ್ಪಿತಸ್ಥರು ಯಾರೇ ಇರಲಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳದೆ ಬಿಡುವುದಿಲ್ಲ” ಎಂದು ಮೋದಿ ಹೇಳಿದರು. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ವಿಡಿಯೊ ವೈರಲ್‌ ಆದ ಹಿನ್ನೆಲೆಯಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.

Exit mobile version