Site icon Vistara News

Modi Caste: ಪ್ರಧಾನಿ ಮೋದಿ ಹಿಂದುಳಿದ ಜಾತಿಯಲ್ಲಿ ಹುಟ್ಟಿಲ್ಲ! ರಾಹುಲ್‌ ಗಾಂಧಿ ಹೊಸ ಸಂಶೋಧನೆ!

Rahul Gandhi

ಭುವನೇಶ್ವರ: ಲೋಕಸಭೆ ಚುನಾವಣೆಗೆ (Lok Sabha Election 2024) ದಿನಗಣನೆ ಆರಂಭವಾಗಿರುವ ಮಧ್ಯೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ಪರಸ್ಪರ ವಾಗ್ದಾಳಿ, ವಾಗ್ಬಾಣ, ಟೀಕೆ, ವ್ಯಂಗ್ಯ, ಆರೋಪಗಳು ಶುರುವಾಗಿವೆ. ರಾಜ್ಯಸಭೆಯಲ್ಲಿಯೇ ನರೇಂದ್ರ ಮೋದಿ (Narendra Modi) ಅವರು ಪ್ರತಿಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಇದರ ಬೆನ್ನಲ್ಲೇ, ಮೋದಿ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಮಹತ್ವದ ಆರೋಪ ಮಾಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಕೆಟಗರಿಯಲ್ಲಿ (OBC Category) ಜನಿಸಿಯೇ ಇಲ್ಲ” ಎಂದು ಹೇಳಿದ್ದಾರೆ.

ಒಡಿಶಾದ ಜರ್ಸುಗುಡದಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೈಗೊಳ್ಳುವ ವೇಳೆ ಸಾರ್ವಜನಿಕರನ್ನುದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದರು. “ನರೇಂದ್ರ ಮೋದಿ ಅವರು ಇತರೆ ಹಿಂದುಳಿದ ವರ್ಗಗಳ (OBC) ಕೆಟಗರಿಯಲ್ಲಿ ಜನಿಸಿದವರಲ್ಲ. ಅವರು ಗುಜರಾತ್‌ನ ತೇಲಿ ಸಮುದಾಯದಲ್ಲಿ ಜನಿಸಿದ್ದಾರೆ. ತೇಲಿ ಸಮುದಾಯವನ್ನು 2000ರಲ್ಲಿ ಬಿಜೆಪಿಯು ಒಬಿಸಿ ಕೆಟಗರಿಗೆ ಬಿಜೆಪಿಯು ಸೇರ್ಪಡೆ ಮಾಡಿದೆ. ಹಾಗಾಗಿ, ನರೇಂದ್ರ ಮೋದಿ ಅವರು ಒಬಿಸಿಯಲ್ಲಿ ಜನಿಸಿಲ್ಲ. ಅವರು ಸಾಮಾನ್ಯ ಕೆಟಗರಿಯಲ್ಲಿ ಜನಿಸಿದ್ದಾರೆ” ಎಂದು ತಿಳಿಸಿದ್ದಾರೆ.

“ನರೇಂದ್ರ ಮೋದಿ ಅವರ ವಿಷಯದಲ್ಲಿ ಜನರಿಗೆ ಸುಳ್ಳು ಹೇಳಲಾಗಿದೆ. ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ನಾನು ಒಬಿಸಿ ಸಮುದಾಯದವನು ಎಂಬುದಾಗಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಮೋದಿ ಅವರು ಸಾಮಾನ್ಯ ಕೆಟಗರಿಯಲ್ಲಿ ಜನಿಸಿದ್ದಾರೆ. ಇದೇ ಕಾರಣಕ್ಕಾಗಿ ಅವರು ಯಾವುದೇ ಒಬಿಸಿ ಸಮುದಾಯದವರನ್ನು ತಬ್ಬಿಕೊಳ್ಳುವುದಿಲ್ಲ. ರೈತರು, ಕಾರ್ಮಿಕರ ಕೈಕುಲುಕುವುದಿಲ್ಲ. ನಾನು ಒಬಿಸಿ ಸಮುದಾಯದಲ್ಲಿ ಹುಟ್ಟಿದ್ದೇನೆ ಎಂಬುದಾಗಿ ಹೇಳುವ ಮೂಲಕ ನರೇಂದ್ರ ಮೋದಿ ಅವರು ದೇಶದ ಜನರಿಗೆ ದೊಡ್ಡ ಸುಳ್ಳು ಹೇಳಿದ್ದಾರೆ” ಎಂದು ರಾಹುಲ್‌ ಗಾಂಧಿ ಕುಟುಕಿದರು.

ಇದನ್ನೂ ಓದಿ: ದೇಶಕ್ಕೆ ಮನಮೋಹನ್‌ ಸಿಂಗ್‌ ಕೊಡುಗೆ ಅಪಾರ; ರಾಜ್ಯಸಭೆಯಲ್ಲಿ ಮೋದಿ ಬಣ್ಣನೆ

“ಒಬಿಸಿ ಸಮುದಾಯದವರ ಜತೆ ನರೇಂದ್ರ ಮೋದಿ ಅವರು ಬೆರೆಯುವುದಿಲ್ಲ. ಅವರೇನಿದ್ದರೂ, ಬರೀ ಗೌತಮ್‌ ಅದಾನಿಯವರ ಕೈಕುಲುತ್ತಾರೆ. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ಎಂದಿಗೂ ಜಾತಿಗಣತಿ ನಡೆಯಲು ಬಿಡುವುದಿಲ್ಲ. ನಾನು ಬರೆದುಕೊಡುತ್ತೇನೆ, ಜಾತಿಗಣತಿಯನ್ನು ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಮಾತ್ರ ಮಾಡಲು ಸಾಧ್ಯ. ಮೋದಿ ಅವರು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ರಾಹುಲ್‌ ಗಾಂಧಿ ಹೇಳಿದರು. ಇದಕ್ಕೂ ಮೊದಲು ಕೂಡ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡುತ್ತದೆ ಎಂಬುದಾಗಿ ಕಾಂಗ್ರೆಸ್‌ ನಾಯಕ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version