ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯಾವುದೇ ವಿಶೇಷ ಕಾರ್ಯಕ್ರಮ ಇರಲಿ, ಅದ್ಧೂರಿಯಾಗಿ ಡ್ರೆಸ್ ಮಾಡಿಕೊಂಡು ಬರುತ್ತಾರೆ. ಅದರಲ್ಲೂ, ಸ್ವಾತಂತ್ರ್ಯ ದಿನದಂದು (Independence Day) ಮೋದಿ ಅವರ ದಿರಸು ವಿಶೇಷವಾಗಿರುತ್ತದೆ. 2014ರಿಂದ ಇದುವರೆಗೆ ಮೋದಿ ಅವರು ಕೆಂಪುಕೋಟೆಯಲ್ಲಿ ವಿಶೇಷ ಉಡುಪು, ಬಗೆಬಗೆಯ ಪೇಟ ತೊಟ್ಟು ಭಾಷಣ ಮಾಡಿದ್ದಾರೆ. ಈ ಬಾರಿಯೂ ನರೇಂದ್ರ ಮೋದಿ ಅವರು ರಾಜಸ್ಥಾನಿ ಶೈಲಿಯ ಬಾಂಧನಿ (Rajasthani Bandhani) ಎಂಬ ವಿಶೇಷ ಪೇಟ ಧರಿಸಿ ಕೆಂಪುಕೋಟೆಯಲ್ಲಿ ಮಿಂಚಿದರು.
ಹೌದು, ಈ ಬಾರಿ ನರೇಂದ್ರ ಮೋದಿ ಅವರು ರಾಜಸ್ಥಾನಿ ಶೈಲಿಯ ವಿಶೇಷ ಬಾಂಧನಿ ಪ್ರಿಂಟ್ ರುಮಾಲು ಧರಿಸಿದ್ದರು. ಹಳದಿ, ಹಸಿರು ಹಾಗೂ ಕೆಂಪು ಬಣ್ಣಗಳಿಂದ ಪೇಟ ಕಂಗೊಳಿಸುತ್ತಿತ್ತು. ಬಿಳಿ ಕುರ್ತಾ, ಕಪ್ಪು ಬಣ್ಣದ ಜಾಕೆಟ್‌ನಲ್ಲಿ ಮಿಂಚುತ್ತಿದ್ದ ಮೋದಿ ಅವರಿಗೆ ಕಾಟನ್ ಬಾಂಧನಿ ಪೇಟ ಮೆರುಗು ನೀಡಿತು. ವಿಶೇಷ ದಿರಸಿನಲ್ಲಿ ಆಗಮಿಸಿದ ಮೋದಿ ಮೊದಲು ಧ್ವಜಾರೋಹಣ ನೆರವೇರಿಸಿದರು. ಇದಾದ ಬಳಿಕ ಒಂದೂವರೆ ತಾಸು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದರು.
ಮೋದಿ ಅವರು 2022ರಲ್ಲೂ ವಿಶೇಷ ಪೇಟ ಧರಿಸಿದ್ದರು. ಅವರು ಧರಿಸಿದ್ದ ಶ್ವೇತ ವರ್ಣದ ಪೇಟದಲ್ಲಿ ಮುದ್ರಿತ ತ್ರಿವರ್ಣ ಇತ್ತು. ಹೀಗಾಗಿ ಸ್ವಾತಂತ್ರ್ಯೋತ್ಸವ ಸಮಾರಂಭದ ಮಹತ್ವವನ್ನು ಸಾರುವಂತಿತ್ತು. ಸಾಂಪ್ರದಾಯಿಕ ಕುರ್ತಾ, ಪೈಜಾಮ, ನೀಲಿ ಕೋಟ್‌ನಲ್ಲಿ ಪ್ರಧಾನಿ ಮೋದಿ ಕಂಗೊಳಿಸಿದ್ದರು. ಪೇಟದಲ್ಲಿ ” ಹರ್ ಘರ್ ತಿರಂಗಾʼ ಎಂಬ ಸಾಲನ್ನೂ ಮುದ್ರಿಸಲಾಗಿತ್ತು.
2021ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಪ್ರಧಾನಿ ಮೋದಿವರು ಕೇಸರಿ ಮತ್ತು ಬೂದು ಬಣ್ಣದ ಪೇಟ ಧರಿಸಿದ್ದರು. 2019ರಲ್ಲಿ ಬಹು ವರ್ಣರಂಜಿತ ಪೇಟ ತೊಟ್ಟಿದ್ದರು. ಆ ವರ್ಷ ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿಗೆ ಪ್ರಧಾನಿಯಾಗಿದ್ದರು.
2018ರಲ್ಲಿ ಕೇಸರಿ ಬಣ್ಣದ ಪೇಟ ಧರಿಸಿದ್ದರು. ೨೦೧೭ರಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಪೇಟ ತೊಟ್ಟಿದ್ದರು. 2015ರಲ್ಲಿ ಹಳದಿ ಬಣ್ಣದ ಪೇಟ ಹಾಗೂ 2014ರಲ್ಲಿ ಕೆಂಪು ಬಣ್ಣದ ಜೋಧ್‌ಪುರಿ ಪೇಟ ಧರಿಸಿದ್ದರು.