Site icon Vistara News

PM Narendra Modi: ಆ.1ರಂದು ಮೋದಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ; ಏನಿದು ಅವಾರ್ಡ್?

PM Narendra Modi

ನವದೆಹಲಿ: ಹಲವಾರು ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಅವಾರ್ಡ್ (Lakamanya Tilak National Award) ಘೋಷಣೆ ಮಾಡಲಾಗಿದೆ. ಆಗಸ್ಟ್ 1ರಂದು ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಮೋದಿ ಅವರ ನಾಯಕತ್ವದಲ್ಲಿ ದೇಶವು ಪ್ರಗತಿಯಲ್ಲಿ ಸಾಗುತ್ತಿದೆ. ಇದೇ ಕಾರಣಕ್ಕಾಗಿ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತಿದೆ.

ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ತಿಲಕ್ ಸ್ಮಾರಕ್ ಮಂದಿರ್ ಟ್ರಸ್ಟ್ ಕೊಡಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ 41ನೇ ವ್ಯಕ್ತಿಯಾಗಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಸಾಧಾರಣ ನಾಯಕತ್ವ ಮತ್ತು ನಾಗರಿಕರಲ್ಲಿ ದೇಶಭಕ್ತಿಯ ಭಾವನೆಯನ್ನು ಬೆಳೆಸುವಲ್ಲಿ ಅವರ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಟ್ರಸ್ಟ್ ಹೇಳಿದೆ.

ಕಳೆದ ವರ್ಷ ಈ ಪ್ರಶಸ್ತಿಯನ್ನು ಹಿರಿಯ ವಿಜ್ಞಾನಿ ಟೆಸ್ಸಿ ಥಾಮಸ್ ಅವರಿಗೆ ನೀಡಲಾಗಿತ್ತು. ಇವರನ್ನು ಭಾರತದ ಮಿಸೈಲ್ ವುಮೆನ್ ಎಂದು ಗುರುತಿಸಲಾಗುತ್ತದೆ. ಅಗ್ನಿ 4 ಮತ್ತು ಅಗ್ನಿ 5 ಮಿಸೈಲ್ ಸಿಸ್ಟಮ್ಸ್ ಪ್ರಾಜೆಕ್ಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತುಂಬುವಲ್ಲಿಲ್ಲಿ ಟೆಸ್ಸಿ ಥಾಮಸ್ ಅವರು ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ಟ್ರಸ್ಟ್ ಹೇಳಿದೆ.

ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಶರದ್ ಪವಾರ್, ರಾಹುಲ್ ಬಜಾಜ್, ಸೈರಸ್ ಪೂನಾವಾಲ, ಡಾ. ಮನಮೋಹನ್ ಸಿಂಗ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಮುಖರಾಗಿದ್ದಾರೆ. ಈ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರ್ಪಡೆಯಾಗುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Modi Egypt Visit: ಮೋದಿಗೆ ಈಜಿಪ್ಟ್‌ ಅತ್ಯುನ್ನತ ಪ್ರಶಸ್ತಿ; ಪ್ರಧಾನಿಯಾದ ಬಳಿಕ ಸಿಕ್ಕ ಜಾಗತಿಕ ಪ್ರಶಸ್ತಿಗಳೆಷ್ಟು?

ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿತ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ಅವರು ಮುಖ್ಯ ಅತಿಥಿಯಾಗಿರುವ ಎನ್‌ಸಿಪಿ ನಾಯಕರಾಗಿರುವ ಶರದ್ ಪವಾರ್ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಕಾಂಗ್ರೆಸ್ ನಾಯಕರಾದ ಸುಶೀಲ್ ಕುಮಾರ್ ಶಿಂಧೆ ಅವರು ಭಾಗವಹಿಸಲಿದ್ದಾರೆ. ಶಿಂಧೆ ಟ್ರಸ್ಟಿಯೂ ಹೌದು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version