Site icon Vistara News

ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Arvind Kejriwal

ED names Arvind Kejriwal, AAP as accused in Delhi excise policy case

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ (Delhi Excise Policy Case) ಜೈಲು ಪಾಲಾಗಿ, ಮಧ್ಯಂತರ ಜಾಮೀನು ಪಡೆದು ಹೊರಬಂದಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದರು. “ಒಂದು ದೇಶ, ಒಬ್ಬ ನಾಯಕ ಎಂಬುದು ನರೇಂದ್ರ ಮೋದಿ ಅವರ ಮಿಷನ್‌ ಆಗಿದೆ. ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಬದಲಿಸಲಿದ್ದಾರೆ” ಎಂದು ಜೈಲಿನಿಂದ ಬಿಡುಗಡೆಯಾದ ಬಳಿಕ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

“ನರೇಂದ್ರ ಮೋದಿ ಅವರಿಗೆ ಬೇರೆಯವರು ಬೆಳೆಯುವುದು ಇಷ್ಟವಿಲ್ಲ. ದೇಶಕ್ಕೆ ಒಬ್ಬನೇ ನಾಯಕ ಬೇಕು, ಅದು ಅವರೇ ಆಗಿರಬೇಕು. ಈಗಾಗಲೇ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಶಿವರಾಜ್‌ ಸಿಂಗ್‌ ಚೌಹಾಣ್‌, ವಸುಂಧರಾ ರಾಜೆ, ಮನೋಹರ ಲಾಲ್‌ ಖಟ್ಟರ್‌, ರಮಣ್‌ ಸಿಂಗ್‌ ಸೇರಿ ಹಲವು ನಾಯಕರ ರಾಜಕೀಯ ಜೀವನವನ್ನು ಮೋದಿ ಕೊನೆಗೊಳಿಸಿದ್ದಾರೆ. ಶೀಘ್ರದಲ್ಲೇ, ಯೋಗಿ ಆದಿತ್ಯನಾಥ್‌ ಅವರ ರಾಜಕೀಯ ಜೀವನವನ್ನೂ ಇವರು ಕೊನೆಗಾಣಿಸಲಿದ್ದಾರೆ” ಎಂದು ದೂರಿದರು.

“ನರೇಂದ್ರ ಮೋದಿ ಅವರೇನಾದರೂ ಮತ್ತೆ ಪ್ರಧಾನಿಯಾದರೆ, ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಿಗೆ ಯೋಗಿ ಆದಿತ್ಯನಾಥ್‌ ಅವರ ಬದಲಿಗೆ ಬೇರೆಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಿದ್ದಾರೆ. ಆದರೆ, ನಮ್ಮ ದೇಶದ ಇತಿಹಾಸವೇ ಬೇರೆ ಇದೆ. ದೇಶದಲ್ಲಿ ಇದುವರೆಗೆ ಯಾರೆಲ್ಲ ಸರ್ವಾಧಿಕಾರ ಮಾಡಲು ಹೊರಟಿದ್ದರೋ, ಅವರನ್ನೆಲ್ಲ ಜನ ಮನೆಗೆ ಕಳುಹಿಸಿದ್ದಾರೆ. ಈಗ ಮತ್ತೆ ಸರ್ವಾಧಿಕಾರಿಗಳು ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಯತ್ನಿಸುತ್ತಿದ್ದಾರೆ. ಆದರೆ, ದೇಶದ 140 ಕೋಟಿ ಜನ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂಬುದೇ ನನ್ನ ಮನವಿಯಾಗಿದೆ” ಎಂದರು.

“ನಾನು ಮಾತ್ರವಲ್ಲ ಪ್ರತಿಪಕ್ಷಗಳ ಇನ್ನೂ ಹಲವು ನಾಯಕರನ್ನು ಅವರು ಜೈಲಿಗೆ ಕಳುಹಿಸಲಿದ್ದಾರೆ. ಆ ಮೂಲಕ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲಿದ್ದಾರೆ. ಈಗಾಗಲೇ ನಮ್ಮ ಪಕ್ಷದ ಸಚಿವರು, ಜಾರ್ಖಂಡ್‌ ಮುಖ್ಯಮಂತ್ರಿಯಾಗಿದ್ದ ಹೇಮಂತ್‌ ಸೊರೇನ್‌, ಟಿಎಂಸಿ ಸಚಿವರನ್ನು ಜೈಲಿಗೆ ಕಳುಹಿಸಲಾಗಿದೆ. ಹಾಗೇನಾದರೂ ಬಿಜೆಪಿಯೇ ಮತ್ತೆ ಗೆದ್ದರೆ, ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್‌, ಆರ್‌ಜೆಡಿಯ ತೇಜಸ್ವಿ ಯಾದವ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿ ಇನ್ನೂ ಹಲವರು ಜೈಲು ಸೇರಲಿದ್ದಾರೆ. ಕೆಲವರ ರಾಜಕೀಯ ಜೀವನ ಅಂತ್ಯಗೊಳಿಸಲು ತಮ್ಮದೇ ಪಕ್ಷದ ನಾಯಕರನ್ನು ಕೂಡ ಜೈಲಿಗೆ ಕಳುಹಿಸಲಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: Arvind Kejriwal: ಜೈಲಿನಿಂದ ಬಂದ ಕೇಜ್ರಿವಾಲ್‌ಗೆ ಆರತಿ ಬೆಳಗಿ, ಹೂ ಹಾರ ಹಾಕಿ ಸ್ವಾಗತಿಸಿದ ತಾಯಿ! ವಿಡಿಯೊ ನೋಡಿ

Exit mobile version