ಕೋಲ್ಕೊತಾ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡಕಂಡಲ್ಲೆಲ್ಲ ಕಾಲೆಳೆಯುವ ಜಾಯಮಾನ ಬೆಳೆಸಿಕೊಂಡಿರುವ ಟಿಎಂಸಿ ಈಗ ಶ್ರೀಲಂಕಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಉಲ್ಲೇಖಿಸಿ ʻನಿಮಗೂ ಹೀಗೇ ಆಗುತ್ತದೆ.. ನೋಡಿʼ ಎಂದಿದೆ. ಶ್ರೀಲಂಕಾದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದು, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜಿನಾಮೆಗೆ ಆಗ್ರಹಿಸಿ ಅವರ ಮನೆಗೇ ಪ್ರತಿಭಟನಾಕಾರರು ನುಗ್ಗಿದ್ದರು. ಹೀಗಾಗಿ ಗೊಟಬಯ ಅವರು ಜೀವಭಯದಿಂದ ಪರಾರಿಯಾಗಿದ್ದರು. ʻʻಇದೇ ರೀತಿ ನೀವು ಕೂಡಾ ಮನೆ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ಬರುತ್ತದೆʼ ಎಂದಿದ್ದಾರೆ ಟಿಎಂಸಿ ಶಾಸಕ ಇದ್ರಿಸ್ ಅಲಿ.
ಈ ಹೇಳಿಕೆಗೆ ಮುಖ್ಯ ಕಾರಣ. ಪಶ್ಚಿಮ ಬಂಗಾಳದಲ್ಲೇ ನಡೆದಿರುವ ವಿದ್ಯಮಾನ. ಕೋಲ್ಕೊತಾದ ಸೀಲ್ಡಾ ಮೆಟ್ರೋ ಸ್ಟೇಷನ್‌ಸೋಮವಾರ (ಜುಲೈ 11) ಉದ್ಘಾಟನೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೇ ಆಹ್ವಾನ ನೀಡಲಾಗಿಲ್ಲ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮೆಟ್ರೋ ಸ್ಟೇಷನ್ ಉದ್ಘಾಟಿಸಲಿದ್ದಾರೆ.
ಈ ಮೆಟ್ರೋ ಸ್ಟೇಷನ್ ಸ್ಥಾಪನೆಗೆ ಪ್ರಮುಖ ಕಾರಣರೇ ಮಮತಾ ಬ್ಯಾನರ್ಜಿ. ಅವರು ರೈಲ್ವೆ ಮಂತ್ರಿಯಾಗಿದ್ದಾಗ ಆರಂಭಿಸಿದ ಯೋಜನೆ ಇದು. ಇಂಥ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಬಿಡಿ ರಾಜ್ಯದ ಯಾವ ನಾಯಕರನ್ನೂ ಆಹ್ವಾನಿಸಿಸಿಲ್ಲ.. ಇದು ರಾಜ್ಯಕ್ಕೆ ಮಾಡಿರುವ ಅಪಮಾನ- ಎನ್ನುವುದು ಇದ್ರಿಸ್‌ಅಲಿ ಆಕ್ರೋಶ.
ಕೇಂದ್ರ ಸರಕಾರ ಮಮತಾ ಬ್ಯಾನರ್ಜಿ ಅವರನ್ನು ಕಾರ್ಯಕ್ರಮಗಳಿಂದ ದೂರ ಇಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ವಿಕ್ಟೋರಿಯಾ ಮೆಮೋರಿಯಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರ ನೇತೃತ್ವದಲ್ಲಿ ನಡೆದ ಒಂದು ಸಭೆಗೂ ಮಮತಾಗೆ ಆಹ್ವಾನ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ಟಿಎಂಸಿ ಕೇಂದ್ರ ಸರಕಾರ ಒಡೆದು ಆಳುವ ನೀತಿ ಪ್ರಯೋಗಿಸುತ್ತಿದೆ ಎಂದು ಆಕ್ಷೇಪಿಸಿತ್ತು.
ಟಿಎಂಸಿಯ ಈ ಆಪಾದನೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಈ ಎಲ್ಲ ಸಂಪ್ರದಾಯಗಳನ್ನು ಶುರು ಮಾಡಿದ್ದೇ ಟಿಎಂಸಿ ಎಂದಿದೆ. ರಾಜ್ಯ ಸರಕಾರದ ಕಾರ್ಯಕ್ರಮಗಳಿಗೆ ಬಿಜೆಪಿ ಶಾಸಕರು ಮತ್ತು ಸಂಸದರನ್ನು ಕರೆಯದೆ ಹಿಂದೆಲ್ಲ ಟಿಎಂಸಿ ಅಪಮಾನ ಮಾಡಿತ್ತು ಎಂದು ಅದು ಹೇಳಿದೆ.
ಇದೆಲ್ಲದರ ನಡುವೆ ಬಿಜೆಪಿ ಮತ್ತು ಟಿಎಂಸಿ ನಾಯಕರು ಹಾವು-ಮುಂಗುಸಿಗಳಂತೆ ಕಿತ್ತಾಡುವುದರಿಂದ ಎರಡೂ ಪಕ್ಷಗಳ ನಾಯಕರು ಭಾಗವಹಿಸುವ ಸಭೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುತ್ತದೆ. ಮಮತಾ ಬ್ಯಾನರ್ಜಿ ಅವರಂತೂ ಇಂಥ ಕಾರ್ಯಕ್ರಮಗಳಲ್ಲಿ ಆಕ್ರೋಶಭರಿತರಾಗಿ ಕಂಡುಬರುತ್ತಾರೆ.
ಇದನ್ನೂ ಓದಿ| Lanka on fire: ಶ್ರೀಲಂಕಾದ ಅಸಹಾಯಕ ಸ್ಥಿತಿಗೆ ಯಾರು ಕಾರಣ? ನಿಜಕ್ಕೂ ಏನಾಗಿದೆ ದ್ವೀಪ ರಾಷ್ಟ್ರಕ್ಕೆ?