ನವದೆಹಲಿ: ಭಾರತ ಸೇರಿ ವಿಶ್ವಾದ್ಯಂತ ಹೊಸ ವರ್ಷದ (New Year 2024) ಸಂಭ್ರಮ ಮನೆ ಮಾಡಿದೆ. ಭಾನುವಾರ (ಡಿಸೆಂಬರ್ 31) ಮಧ್ಯರಾತ್ರಿಯಿಂದಲೇ ಜನ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ (New Year Celebrations 2024) ತೊಡಗಿದ್ದಾರೆ. ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಮೋಜು-ಮಸ್ತಿ ಮೂಲಕ ನವ ವಸಂತಕ್ಕೆ ಕಾಲಿಟ್ಟಿದ್ದಾರೆ. ಪರಸ್ಪರ ಶುಭಾಶಯ ಕೋರುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೇಶದ ಜನರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
“ದೇಶದ ಪ್ರತಿಯೊಬ್ಬರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 2024ನೇ ಇಸವಿಯು ಪ್ರತಿಯೊಬ್ಬರ ಬಾಳಿನಲ್ಲಿ ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ನೆಲೆಸಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ನರೇಂದ್ರ ಮೋದಿ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಪೋಸ್ಟ್‌ಗೆ ನೂರಾರು ಜನ ಪ್ರತಿಕ್ರಿಯಿಸಿದ್ದು, ಜನ ಪ್ರಧಾನಿಯವರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ದೇಶದ ಬೆಂಗಳೂರು, ಮುಂಬೈ, ದೆಹಲಿ ಸೇರಿ ಹಲವು ಪ್ರಮುಖ ನಗರಗಳಲ್ಲಿ ಭಾನುವಾರ ರಾತ್ರಿಯಿಂದಲೇ ಹೊಸ ವರ್ಷದ ಸಂಭ್ರಮ ಮನೆಮಾಡಿದೆ.
Wishing everyone a splendid 2024! May this year bring forth prosperity, peace and wonderful health for all.
— Narendra Modi (@narendramodi) January 1, 2024
ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಭಾನುವಾರ ಮಧ್ಯರಾತ್ರಿ ಬರಮಾಡಿಕೊಂಡರು. ರಾಜ್ಯದ ವಿವಿಧೆಡೆಯಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಾವಿರಾರು ಜನ ಬೆಂಗಳೂರಿಗೆ ಆಗಮಿಸಿದ್ದರು. ಹೀಗಾಗಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನ ಪಬ್‌ಗಳು, ಹೋಟೆಲ್‌ಗಳು ತುಂಬಿ ತುಳುಕಿದವು. ಇನ್ನು ರಸ್ತೆಗಳಲ್ಲಿ ಯುವಕ-ಯುವತಿಯರು ರಾತ್ರಿಯಿಡೀ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಇದನ್ನೂ ಓದಿ: New Year 2024: ವಿಶ್ವಾದ್ಯಂತ ಹೊಸ ವರ್ಷದ ಸಂಭ್ರಮ ಹೇಗಿತ್ತು? ಇಲ್ಲಿವೆ ಫೋಟೊಗಳು
ಹಾಗೆಯೇ, ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಹಲವರು ಗಣ್ಯರು ಎಕ್ಸ್ ವೇದಿಕೆಯಲ್ಲಿ ಹೊಸ ವರ್ಷದ ಆಗಮನದ ಶುಭಾಶಯಗಳನ್ನು ಕೋರಿದ್ದಾರೆ. ಅವರ ಪೋಸ್ಟ್‌ಗಳು ಸಾಕಷ್ಟು ವೈರಲ್ ಕೂಡ ಆಗಿವೆ. ಹಾಂಕಾಂಗ್, ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಭರ್ಜರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಪೆಸಿಫಿಕ್ ರಾಷ್ಟ್ರವಾದ ಕಿರಿಬಾಟಿಯು 2024 ರ ಹೊಸ ವರ್ಷವನ್ನು ಬರಮಾಡಿಕೊಂಡ ಮೊದಲ ದೇಶವಾಗಿದೆ ಕ್ರಿಸ್‌ಮಸ್ ದ್ವೀಪ ಎಂದೂ ಕರೆಯಲ್ಪಡುವ ದೇಶದ ಅತಿದೊಡ್ಡ ದ್ವೀಪವು 10:00(ಭಾರತೀಯ ಕಾಲಮಾನ)ಕ್ಕೆ 2024 ಅನ್ನು ಪ್ರವೇಶಿಸಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ